ನವದೆಹಲಿ, ಫೆ.01 (Daijiworld News/PY): "ಪ್ರಧಾನಿ ನರೇಂದ್ರ ಮೋದಿ ಅವರು ತಮಿಳಿನ ಶ್ರೇಷ್ಠ ಕವಿ ತಿರುವಳ್ಳುವರ್ ಅವರ ಮಾರ್ಗದರ್ಶನದ ಮೇಲೆ ನಂಬಿಕೆ ಇಟ್ಟಿದ್ದಾರೆ. ತಿರುವಳ್ಳುವರ್ ಅವರ ಆಶಯದಂತೆ ಸಮಾಜದ ಪ್ರಮುಖ ಐದು ಅಂಶಗಳನ್ನು ಅನುಸರಿಸುತ್ತಾ ಅಭಿವೃದ್ದಿಯ ಹಾದಿಯಲ್ಲಿ ನಡೆಯುತ್ತಿದ್ಧಾರೆ" ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಶುಕ್ರವಾರ ಸಂಸತ್ನಲ್ಲಿ 2020ರ ಬಜೆಟ್ ಮಂಡಿಸಿ ಬಳಿಕ ಬಜೆಟ್ನ ಕುರಿತಾಗಿ ಭಾಷಣ ಮಾಡಿದ ನಿರ್ಮಲಾ ಸೀತಾರಾಮನ್ ಅವರು, "ಸುಮಾರು ಮೂರು ವರ್ಷಗಳ ಹಿಂದೆ ಬದುಕಿದ್ದ ತಮಿಳಿನ ಶ್ರೇಷ್ಠ ಕವಿ ತಿರುವಳ್ಳುವರ್ ಅವರ ಮಾದರಿ ದೇಶದ ಬಗ್ಗೆ ದ್ವಿಪದಿಗಳನ್ನು ರಚಿಸಿದ್ದಾರೆ" ಎನ್ನುತ್ತಾ, ಪ್ರಧಾನಿ ನರೇಂದ್ರ ಮೋದಿ ಅವರನ್ನು ತಿರುವಳ್ಳುವರ್ ಅವರಿಗೆ ಹೋಲಿಕೆ ಮಾಡಿ ಮಾತನಾಡಿದ್ದಾರೆ.
"ತಿರುವಳ್ಳುವರ್ ಅವರ ಸಾಲಿನಲ್ಲಿ ಯಾವ ದೇಶದಲ್ಲಿ ಜನರಿಗೆ ಉತ್ತಮ ಶಿಕ್ಷಣ, ಉತ್ತಮ ಆರೋಗ್ಯ, ಶ್ರೀಮಂತ ಹಣಕಾಸು ವ್ಯವಸ್ಥೆಯ ಜೊತೆಗೆ, ರೈತ ಹಾಗೂ ಸೈನಿಕ ಸಂತೋಷವಾಗಿ ಬಾಳುತ್ತಾನೋ ಅದುವೇ ನಿಜವಾದ ಮಾದರಿ ದೇಶ. ಹೀಗಾಗಿ ಕವಿ ತಿರುವಳ್ಳುವರ್ ಮಾದರಿ ದೇಶದ ಪರಿಕಲ್ಪನೆಯನ್ನು ಚಾಲ್ತಿಗೆ ತರಲು ಪ್ರಧಾನಿ ಮೋದಿ ಅವರು ಶ್ರಮಿಸುತ್ತಿದ್ದಾರೆ" ಎಂದರು.
"ದೇಶದ ಆರ್ಥಿಕತೆ ಅಭಿವೃದ್ಧಿಯತ್ತ ಸಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ 5ನೇ ದಿಗ್ಗಜ ಆರ್ಥಿಕ ರಾಷ್ಟ್ರ. ಕಳೆದ 6 ವರ್ಷದ ಅಧಿಕಾರದ ಅವಧಿಯಲ್ಲಿ ನರೇಂದ್ರ ಮೋದಿ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಹತ್ತಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಇನ್ನೂ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಸರ್ಕಾರ ರೈತರಿಗೆ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಮಾಡಿದ್ದು, ರೈತರ ಬೆಳೆಗಳಿಗೆ ತಕ್ಕ ಬೆಲೆ ದೊರೆಯುತ್ತಿದೆ" ಎಂದು ತಿಳಿಸಿದರು.
"ದೇಶದ ರಕ್ಷಣೆಯಲ್ಲಿ ರಾಜಿಯಾಗುವ ಮಾತೇ ಇಲ್ಲ. ದೇಶದ ರಕ್ಷಣೆ ಬಿಜೆಪಿ ಸರ್ಕಾರ ಪ್ರಮುಖ ಆದ್ಯತೆಗಳಲ್ಲಿ ಒಂದಾದ ವಿಷಯವಾಗಿದೆ. ಗಡಿಯಲ್ಲಿ ದೇಶ ಕಾಯುವ ಸೈನಿಕರಿಗೂ ಅನುಕೂಲವಾಗುವ ರೀತಿಯಲ್ಲಿ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತದೆ" ಎಂದು ಹೇಳಿದರು.
ಈ ಸಂದರ್ಭ ಸದನದಲ್ಲಿ ವಿರೋಧ ಪಕ್ಷದ ಸಂಸದರು ನಿರ್ಮಲಾ ಸೀತಾರಾಮನ್ ಅವರ ಮಾತನ್ನು ವಿರೋಧಿಸಿದ್ದು, ನರೇಂದ್ರ ಮೋದಿ ಅವರನ್ನು ಕವಿ ತಿರುವಳ್ಳುವರ್ ಅವರಿಗೆ ಹೋಲಿಸಿದ ಕ್ರಮ ಸರಿಯಲ್ಲ ಎಂದು ತಮಿಳುನಾಡಿನ ಎಲ್ಲಾ ಡಿಎಂಕೆ ಸಂಸದರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.