ಬೆಂಗಳೂರು, ಫೆ.01 (Daijiworld News/PY) : ಶನಿವಾರ 2020–21ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ದೇಶದ ಬಜೆಟ್ ಇತಿಹಾಸದಲ್ಲೇ ದೀರ್ಘಾವಧಿಯ ಭಾಷಣ ಮಾಡಿದ್ದು, ಇದು ಹೊಸ ದಾಖಲೆಗೆ ಸೇರ್ಪಡೆಯಾಗಿದೆ. ಸುಮಾರು 2 ಗಂಟೆ 30 ನಿಮಿಷಗಳವರೆಗೆ ಭಾಷಣ ಮಾಡಿದ್ದಾರೆ.
ಬಜೆಟ್ ಓದಲು ತಡವರಿಸಿದ ನಿರ್ಮಾಲಾ ಸೀತಾರಾಮನ್ ಅವರಿಗೆ ಕುಳಿತು ಓದಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಲಹೆ ನೀಡಿದ್ದರು. ನಿರಂತರವಾಗಿ 2 ಗಂಟೆ 30 ನಿಮಿಷಗಳವರೆಗೆ ಭಾಷಣ ಮಾಡಿದ ನಿರ್ಮಲಾ ಸೀತಾರಾಮನ್ ಅವರು ಕೆಲ ಪುಟಗಳು ಬಾಕಿಯಿರುವಂತೆ ಭಾಷಣ ಮುಕ್ತಾಗೊಳಿಸಿದ್ದಾರೆ.
2019–2020ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಲ್ಲಿ ನಿರ್ಮಲಾ ಅವರು, 2 ಗಂಟೆ 17 ನಿಮಿಷ ಬಜೆಟ್ ಭಾಷಣ ಮಾಡಿದ್ದು, 2003ರಲ್ಲಿ ಆಗಿನ ಹಣಕಾಸು ಸಚಿವರಾಗಿದ್ದ ಜಸ್ವಂತ್ ಸಿಂಗ್ ಅವರು ಮಾಡಿದ್ದ ಬಜೆಟ್ ಭಾಷಣಕ್ಕಿಂತ 4 ನಿಮಿಷ ಹೆಚ್ಚು ಸಮಯವನ್ನು ನಿರ್ಮಲಾ ಸೀತಾರಾಮನ್ ತೆಗೆದುಕೊಂಡಿದ್ದರು.
ಮಾಜಿ ಪ್ರಧಾನಿ ಹಾಗೂ ಹಣಕಾಸು ಸಚಿವ ಮನಮೋಹನ್ ಸಿಂಗ್ ಅವರು ಬಜೆಟ್ ಮಂಡನೆ ವೇಳೆ ಅತಿ ಜಾಸ್ತಿ ಪದಗಳನ್ನು ಬಳಸಿದ್ದು, ಅವರು 1991ರ ಬಜೆಟ್ ಮಂಡನೆಯ ಸಂದರ್ಭ 18,650 ಪದಗಳನ್ನು ಬಳಸಿದ್ದರು. 2018ರಲ್ಲಿ ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ 18,604 ಪದಗಳನ್ನು ಬಳಸುವ ಮುಖಾಂತರ ಬಜೆಟ್ ಭಾಷಣದಲ್ಲಿ ಅತಿ ಹೆಚ್ಚು ಪದಗಳನ್ನು ಬಳಸಿದವರ ಪೈಕಿ 2ನೇ ಸ್ಥಾನದಲ್ಲಿದ್ದು, ಅವರು 2014, 2017 ಹಾಗೂ 2016ರಲ್ಲಿ ಮಾಡಿದ ಬಜೆಟ್ ಭಾಷಣದ ಅವಧಿಯು ಕ್ರಮವಾಗಿ 3, 4 ಹಾಗೂ 5ಸ್ಥಾನದಲ್ಲಿದೆ.
ಎಚ್.ಎಂ.ಪಟೇಲ್ ಅವರು ಬಜೆಟ್ ಇತಿಹಾಸದಲ್ಲಿ ಅತಿ ಕಡಿಮೆ ಪದಗಳನ್ನು ಬಳಸಿದ್ದಾರೆ. ಅವರು 1977ರ ಮಧ್ಯಂತರ ಬಜೆಟ್ ಮಂಡನೆಯಲ್ಲಿ ಮಾಡಿದ್ದ ಭಾಷಣ 800 ಪದಗಳನ್ನು ಒಳಗೊಂಡಿತ್ತು.