ಶ್ರೀನಗರ, ಫೆ.01 (Daijiworld News/PY) : ಹಿಝ್ಬುಲ್-ಮುಜಾಹಿದ್ದೀನ್ ಉಗ್ರ ಸಂಘಟನೆಯ ನವೀದ್ ಮುಸ್ತಾಕ್ ಜೊತೆ ಜ. 11ರಂದು ಬಂಧಿಸಲ್ಪಟ್ಟ ಜಮ್ಮು ಕಾಶ್ಮೀರ ಪೊಲೀಸ್ ಅಧಿಕಾರಿ ದೇವಿಂದರ್ ಸಿಂಗ್ ಹೆಸರು ಉಗ್ರಗಾಮಿ ಸಂಘಟನೆಯ ವೇತನ ಪಟ್ಟಿಯಲ್ಲಿ ಸೇರಿದೆ ಎಂದು ತನಿಖಾಧಿಕಾರಿಗಳು ಬಹಿರಂಗಪಡಿಸಿರುವುದಾಗಿ ವರದಿ ಮಾಡಿದೆ.
ವರ್ಷವಿಡೀ ನಿಯತವಾಗಿ ಉಗ್ರಗಾಮಿ ಸಂಘಟನೆಯಿಂದ ಹಣ ಪಡೆಯುತ್ತಿದ್ದ ಅಲ್ಲದೇ, ನವೀದ್ನನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕರೆದೊಯ್ದು ಸುರಕ್ಷಿತ ವಸತಿ ವ್ಯವಸ್ಥೆ ಮಾಡಿಕೊಡಲು ಹಣ ಪಡೆಯುತ್ತಿದ್ದ ಎಂಬ ವಿಷಯ ತಿಳಿದು ಬಂದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪಾಕಿಸ್ತಾನಕ್ಕೆ ನವೀದ್ನನ್ನು ಕಳುಹಿಸಲು ಸಿದ್ದತೆ ಮಾಡಲಾಗಿತ್ತು. ಇದಕ್ಕಾಗಿ ದೇವಿಂದರ್ ಸಿಂಗ್ 20 ರಿಂದ 30 ಲಕ್ಷ ರೂ. ನೀಡುವಂತೆ ಉಗ್ರ ಸಂಘಟನೆ ಜೊತೆ ಮಾತುಕತೆ ನಡೆಸಿದ್ದು, ಪೂರ್ಣ ಹಣ ದೇವೆಂದರ್ ಸಿಂಗ್ಗೆ ಸಿಕ್ಕಿರಲಿಲ್ಲ ಎಂದು ತಿಳಿದುಬಂದಿದೆ. ಕಳೆದ ವರ್ಷ ದೇವೀಂದರ್ ಸಿಂಗ್ ಇದೇ ರೀತಿಯಾಗಿ ನವೀದ್ನನ್ನು ಜಮ್ಮುವಿಗೆ ಕರೆದುಕೊಂಡು ಹೋಗಿದ್ದು ಚಳಿಗಾಲದ ವೇಳೆ ವಸತಿಗೆ ವ್ಯವಸ್ಥೆ ಮಾಡಿರುವುದಾಗಿ ಮೂಲಗಳು ತಿಳಿಸಿವೆ.
ದೇವೆಂದರ್ ಸಿಂಗ್ ತಾನು ಅಮಾಯಕ ಎಂದು ಹೇಳಿಕೊಳ್ಳುತ್ತಿದ್ದು, ಎನ್ಐಎ ತನಿಖಾಧಿಕಾರಿಗಳ ಜೊತೆ ವಿಚಾರಣೆಗೆ ದೇವಿಂದರ್ ಸಿಂಗ್ ಸಹಕರಿಸುತ್ತಿಲ್ಲ ಅಲ್ಲದೇ ಫೋನ್ನಲ್ಲಿರುವ ಸಂಪರ್ಕ ಸಂಖ್ಯೆಯ ವ್ಯಕ್ತಿಗಳನ್ನು ಕೂಡಾ ಗುರುತಿಸಲು ಸಹಕರಿಸುತ್ತಿಲ್ಲ. ತಾಂತ್ರಿಕ ಅಂಶಗಳ ಆಧಾರದ ಮೇಲೆ ತನಿಖೆ ನಡೆಸಿದರೆ ಆತನ ಸಂಪರ್ಕ ಹಾಗೂ ಹಣಕಾಸು ಬಗ್ಗೆ ಹೆಚ್ಚಿನ ವಿವರಗಳು ಸಿಗಲಿವೆ ಎಂದು ಉನ್ನತ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
1990ರಲ್ಲಿ ದೇವಿಂದರ್ ಸಿಂಗ್ ಸಬ್ ಇನ್ಸ್ಪೆಕ್ಟರ್ ಆಗಿ ಪೊಲೀಸ್ ಇಲಾಖೆಗೆ ಸೇರಿದ್ದು, ಹಲವು ಮಂದಿ ಉಗ್ರರ ಬಂಧನ, ಹತ್ಯೆ ಮಾಡಿದ್ದರು. ದೇವಿಂದರ್ ಅವರ ಹುಟ್ಟೂರಾದ ಸೋಪಿಯಾನ ಜೊತೆ ನಿಕಟ ಸಂಪರ್ಕ ಹೊಂದಿದ್ದರು. 2017ರ ಪುಲ್ವಾಮ ಕಾಯಾಚರಣೆಗಾಗಿ 2018ರಲ್ಲಿ ದೇವಿಂದರ್ ಸಿಂಗ್ ಅವರಿಗೆ ಶೌರ್ಯ ಪ್ರಶಸ್ತಿ ನೀಡಲಾಗಿತ್ತು.