ಹಾಸನ, ಫೆ.01 (Daijiworld News/PY) : "ಅಂಗನವಾಡಿ ಕಾರ್ಯಕರ್ತರಿಗೆ ಫೋನ್ ನೀಡಿದರೆ ಎಲ್ಲಾ ಆಗುತ್ತಾ. ಪ್ರಾಥಮಿಕ ಶಿಕ್ಷಣಕ್ಕೆ ಬಜೆಟ್ನ ಕೊಡುಗೆ ಏನು" ಎಂದು ಮಾಜಿ ಸಚಿವ ರೇವಣ್ಣ ಕೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಮಾಜಿ ಸಚಿವ ರೇವಣ್ಣ ಅವರು, "ಈಗಾಗಲೇ ಪ್ರಾಥಮಿಕ ಶಾಲೆಗಳು ಮುಚ್ಚು ಹಂತಕ್ಕೆ ಬಂದು ತಲುಪಿವೆ. ಎಲ್ಲ ಸರ್ಕಾರಿ ಶಾಲೆ ಖಾಸಗಿಯವರ ಹಿಡಿತಕ್ಕೆ ಹೋಗುವಂತ ಸ್ಥಿತಿಯಲ್ಲಿವೆ. ಶಿಕ್ಷಣ ಇಲಾಖೆ ಸಂಪೂರ್ಣ ಖಾಸಗೀಕರಣ ಆಗೋದಂತು ಸತ್ಯ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾರಣವಾಗುತ್ತಿವೆ" ಎಂದರು.
"ಕನ್ನಡದ ಜೊತೆಗೆ ನಮ್ಮ ಮಕ್ಕಳಿಗೆ ಇಂಗ್ಲೀಷ್ ಕಲಿಸುವ ಗುಣಮಟ್ಟದ ಶಿಕ್ಷಣ ಅಗತ್ಯವಾಗಿದೆ. ಬಜೆಟ್ನಲ್ಲಿ ಏನಾದರೂ ಮಾಡಿಕೊಳ್ಳಿ ಆದರೆ, ಹಳ್ಳಿ ಹಾಗೂ ಬಡವರ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ಘೋಷಣೆ ಮಾಡಿ" ಎಂದು ಹೇಳಿದರು.
ಕೇಂದ್ರ ಬಜೆಟ್ನ ಬಗ್ಗೆ ಮಾತನಾಡಿದ ಅವರು, "ಅಂಗನವಾಡಿ ಕಾರ್ಯಕರ್ತರಿಗೆ ಫೋನ್ ಕೊಡುವುದರಿಂದ ಎಲ್ಲಾ ಆಗುತ್ತಾ, ಹಾಗಾದರೆ, ಪ್ರಾಥಮಿಕ ಶಿಕ್ಷಣಕ್ಕೆ ಬಜೆಟ್ನ ಕೊಡುಗೆ ಏನಿದೆ. ಬಜೆಟ್ನಲ್ಲಿ ಮಾತ್ರ ಘೋಷಣೆಯಾಗುತ್ತದೆಯೇ ಹೊರತು ಇಂಪ್ಲಿಮೆಂಟ್ ಆಗುವುದಿಲ್ಲ" ಎಂದು ಹೇಳಿದ್ದಾರೆ.