ಬೆಂಗಳೂರು, ಫೆ.01 (Daijiworld News/PY) : 2020-2021ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಿದ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಅಭಿನಂದಿಸಿದ್ದು, "ಪ್ರಸಕ್ತ ಸಾಲಿನ ಬಜೆಟ್ ಜನಸ್ನೇಹಿಯಾಗಿದ್ದು, ಕೃಷಿಕರು, ಬಡವರ ಪರವಾಗಿದೆ" ಎಂದು ಹೇಳಿದರು.
2020-2021ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಕುರಿತು ಮಾತನಾಡಿದ ಅವರು, ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ರೈತರಿಗೆ, ಬಡವರಿಗೆ ಹಾಗೂ ಹಳ್ಳಿಗಳಿಗೆ ಇಷ್ಟೊಂದು ಆದ್ಯತೆ ನೀಡಿದ ಬಜೆಟ್ ಎಂದೂ ಬಂದಿಲ್ಲ. ಈ ಆಯವ್ಯಯ ರೈತರಿಗೆ ವರದಾನವಾಗಲಿದೆ ಎಂದು ಹೇಳಿದರು.
ಈ ಬಜೆಟ್ನಲ್ಲಿ ಘೋಷಿಸಿರುವ ಕಾರ್ಯಕ್ರಮಗಳು 2022ರಲ್ಲಿ ರೈತರ ಆದಾಯಯವನ್ನು ದ್ವಿಗುಣ ಮಾಡುವ ಗುರಿ ಸಾಧನೆಗೆ ಪೂರಕವಾಗಿದೆ. 100 ಜಲಕ್ಷಾಮ ಜಿಲ್ಲೆಗಳಲ್ಲಿ ವಿಶೇಷ ಯೋಜನೆ ರೈತರಿಗೆ ನೆರವಾಗಲಿದೆ.ಜಮೀನುಗಳಲ್ಲಿ ರೈತರು ರಸಾಯನಿಕ ಗೊಬ್ಬರದ ಬಳಕೆಯನ್ನು ಕಡಿಮೆ ಮಾಡುವುದು ಮೊದಲಾದ ಕಾರ್ಯಕ್ರಮಗಳು ಕೃಷಿ ವಲಯಕ್ಕೆ ಹೆಚ್ಚಿನ ಉತ್ತೇಜನ ನೀಡಲಿದೆ. 20 ಲಕ್ಷ ರೈತರಿಗೆ ಸೌರ ಪಂಪ್ಸೆಟ್ಗಳನ್ನು ಒದಗಿಸಲು ನೆರವು, ವಿದ್ಯುತ್ ಸ್ವಾವಲಂಬನೆ ನಿಟ್ಟಿನಲ್ಲಿ ಬಂಜರು ಭೂಮಿಯಲ್ಲಿ ಸೌರ ವಿದ್ಯುತ್ ಉತ್ಪಾದನೆಗೆ ಉತ್ತೇಜನ ನೀಡಲಿದೆ.
ಕೃಷಿ ಉತ್ಪನ್ನಗಳ ಸಾಗಾಣಿಕೆ ಹಾಗೂ ರಫ್ತು ಮಾಡಲು ಕಿಸಾನ್ ರೈಲು, ಕಿಸಾನ್ ಉಡಾನ್ ಯೋಜನೆ ಸಹಾಯಕವಾಗಲಿದೆ. 2.83 ಲಕ್ಷ ಕೋಟಿ ದೊಡ್ಡ ಬಜೆಟ್. ಕೃಷಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಕ್ಷಯ ರೋಗ ನಿವಾರಣೆ, ಜನ ಔಷಧಿ ಕೇಂದ್ರಗಳ ವಿಸ್ತರಣೆ, ಆರೋಗ್ಯ ಸೇವೆ ಸುಧಾರಣೆಗೆ ಆದ್ಯತೆ, ವೈದ್ಯಕೀಯ ಶಿಕ್ಷಣಕ್ಕೆ ಒತ್ತು ನೀಡಿರುವುದು ಪ್ರಶಂಸನೀಯ ಎಂದು ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಹಾಗೂ ವಿದೇಶಿ ಸಾಲ ಪಡೆಯಲು ಅನುಮತಿ ದೊರೆತಿರುವುದು ರಾಜ್ಯದ ವಿಶ್ವವಿದ್ಯಾಲಯಗಳಿಗೆ ಬಹಳ ಸಹಾಯವಾಗಲಿದೆ. ಅಲ್ಲದೆ ಆನ್ಲೈನ್ ಶಿಕ್ಷಣ ವ್ಯವಸ್ಥೆಯನ್ನು ಘೋಷಿಸಿರುವುದು ಒಂದು ಮಹತ್ವಪೂರ್ಣ ಬೆಳವಣಿಗೆಯಾಗಿದೆ. ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗಾವಕಾಶಕ್ಕೆ ಪೂರಕವಾಗಿದೆ ಎಂದರು.
ಉತ್ಪಾದನಾ ವಲಯದಲ್ಲಿ ರಫ್ತಿಗೆ ಉತ್ತೇಜನ ನೀಡುವ ಮೂಲಕ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗಿದೆ. ಮೂಲಸೌಕರ್ಯ ಅಭಿವೃದ್ಧಿಗೆ 1 ಲಕ್ಷ ಕೋಟಿ ರೂ. ಒದಗಿಸಿರುವುದು ಹೂಡಿಕೆದಾರರಿಗೆ ಉತ್ತಮ ಸಂದೇಶವನ್ನು ನೀಡಿದೆ. 18600 ಕೋಟಿ ರೂ. ಅಂದಾಜು ವೆಚ್ಚದ ಬೆಂಗಳೂರು ಸಬ್ಅರ್ಬನ್ ರೈಲಿಗೆ ಅನುಮೋದನೆ ನೀಡಿದ್ದು. ಭಾರತ ಸರ್ಕಾರದ ಶೇ.20ರಷ್ಟು ಪಾಲು, ರಾಜ್ಯ ಸರ್ಕಾರದ ಶೇ.20ರಷ್ಟು ಪಾಲು ಹಾಗೂ ಶೇ. 60ರಷ್ಟು ಬಾಹ್ಯ ನೆರವಿನ ಮೂಲಕ ಅನುಷ್ಠಾನಗೊಳಿಸಲಾಗುವುದು, ಇದು ರಾಜಧಾನಿಯ ಸಂಚಾರ ದಟ್ಟಣೆ ಕಡಿಮೆ ಮಾಡುವಲ್ಲಿ ಬಹಳ ಅನುಕೂಲವಾಗಿದೆ.
ಆದಾಯ ತೆರಿಗೆ ಹಾಗೂ ಕಾರ್ಪೊರೇಟ್ ತೆರಿಗೆ ಇಳಿಕೆ, ತೆರಿಗೆದಾರರಿಗೆ ಕಿರುಕುಳ ತಡೆಯುವ ನಿಟ್ಟಿನಲ್ಲಿ ತೆರಿಗೆ ಪಾವತಿದಾರರ ಚಾರ್ಟರ್ ಕೇಂದ್ರದ ಮಹತ್ವಪೂರ್ಣ ಕ್ರಮಗಳಾಗಿವೆ. ರಾಷ್ಟ್ರೀಯ ನೇಮಕಾತಿ ಸಂಸ್ಥೆಯನ್ನು ಪ್ರಾರಂಭಿಸುವ ಮೂಲಕ ನಾನ್ ಗೆಜೆಟೆಡ್ ಹುದ್ದೆಗಳ ನೇಮಕಾತಿಯನ್ನು ಸರಳಗೊಳಿಸುವ ಕೇಂದ್ರದ ತೀರ್ಮಾನವೂ ಉತ್ತಮವಾಗಿದೆ ಎಂದು ಸಿಎಂ ಬಿಎಸ್ವೈ ತಿಳಿಸಿದ್ದಾರೆ.