ಬೆಂಗಳೂರು, ಫೆ.01 (Daijiworld News/PY) : "ಪ್ರಸ್ತುತ ದೇಶದಲ್ಲಿ ಕೃಷಿ ಬೆಳವಣಿಗೆಯು ಶೇ.2.5 ಮಾತ್ರ ಇದೆ. ರೈತರ ಆದಾಯ ದ್ವಿಗುಣವಾಗಬೇಕಾದರೆ ಕೃಷಿ ಬೆಳವಣಿಗೆ ಶೇ.10 ರಷ್ಟಾದರೂ ಇರಬೇಕು" ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.
"ರೈತರ ಹೆಸರಿನಲ್ಲಿ ವಿವಿಧ ಯೋಜನೆಗಳನ್ನು ಘೋಷಿಸಲಾಗಿದ್ದು ಕಿಸಾನ್ ಉಡಾನ್ನಿಂದ ಸಾಮಾನ್ಯ ರೈತರಿಗೆ ಅನುಕೂಲವಿದೆಯೇ. ಈ ಯೋಜನೆಯಲ್ಲಿ ಯಾವ ಬೋರೇಗೌಡ ತೆಗೆದುಕೊಂಡು ಹೋಗುತ್ತಾನೆ. ಭೂಮಿ ಗುತ್ತಿಗೆ, ಎಪಿಎಂಸಿ ಅಮೂಲಾಗ್ರ ಬದಲಾವಣೆ, ಮಾರುಕಟ್ಟೆ ಬದಲಾವಣೆ ಮಾಡುತ್ತೇವೆ ಎಂದು ಹೇಳಿದ್ದು ಇವೆಲ್ಲವೂ ಕೃಷಿ ವಲಯದಲ್ಲಿನ ಖಾಸಗೀಕರಣದ ಭಾಗವಾಗಿದೆ" ಎಂದು ಹೇಳಿದರು.
"ಇದು ರೈತರಿಗೆ, ಯುವಕರಿಗೆ ಆಶಾದಾಯಕ ಬಜೆಟ್ ಅಲ್ಲ, ನಿರ್ಮಾಣ, ಉತ್ಪಾದನಾ ವಲಯದಲ್ಲಿ ಹಿಂಜರಿತವಿರುವುದರಿಂದ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಪ್ರತಿ ಬಜೆಟ್ನಲ್ಲೂ ಉದ್ಯೋಗ ಇಳಿಕೆಯಾಗುತ್ತಿರುವುದು ತಿಳಿಯುತ್ತಿದೆ. ಬೆಂಗಳೂರಿಗೆ ಸಬ್ಅರ್ಬನ್ ರೈಲು ಮಾಡುತ್ತೇವೆ ಎಂದೂ ಈ ಬಜೆಟ್ನಲ್ಲೂ ಹೇಳಿದ್ದಾರೆ. ಅಲ್ಲದೇ ಕಳೆದ ಬಜೆಟ್ನಲ್ಲೂ ಇದನ್ನೇ ಹೇಳಿದ್ದಾರೆ" ಎಂದರು.
"ಈಗಲೂ ಹಣ ಮೀಸಲಿಟ್ಟಿಲ್ಲ, ಕಳೆದ ಸಲ ಒಂದು ರೂಪಾಯಿಯನ್ನು ನೀಡಿರಲಿಲ್ಲ. ಬೆಂಗಳೂರಿಗರು ಸಂತೋಷಗೊಳ್ಳಲಿ ಎಂದು ಮತ್ತೆ ಮತ್ತೆ ಹೇಳುತ್ತಿದ್ದಾರೆ. ಎಲ್ಲಾ ದೃಷ್ಠಿಕೋನದಲ್ಲೂ ನೋಡಿದರೆ ಇದೊಂದು ನಿರಾಶಾದಾಯಕ ಬಜೆಟ್ ಆಗಿದೆ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.