ನವದೆಹಲಿ, ಫೆ.01 (Daijiworld News/PY) : 2020-2021ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಿದ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದು, 'ಇದು ದೂರದೃಷ್ಟಿಯ ಬಜೆಟ್' ಎಂದು ಹೇಳಿದ್ದಾರೆ.
ದೂರದೃಷ್ಠಿ ಹೊಂದಿರುವ ದಶಕದ ಮೊದಲ ಬಜೆಟ್ ಮಂಡಿಸಿದ್ದಕ್ಕಾಗಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹಾಗೂ ಅವರ ತಂಡವನ್ನು ನಾನು ಅಭಿನಂದಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
'ಈ ವರ್ಷದ ಬಜೆಟ್ ಕೃಷಿ, ಮೂಲಸೌಕರ್ಯ, ಜವಳಿ ಮತ್ತು ತಂತ್ರಜ್ಞಾನದ ನಾಲ್ಕು ಪ್ರಮುಖ ಕ್ಷೇತ್ರಗಳನ್ನು ಕೇಂದ್ರೀಕರಿಸಿದ್ದು, ಉದ್ಯೋಗ ಸೃಷ್ಟಿಗೆ ಸಹಾಯವಾಗಲಿದೆ. ಜೊತೆಗೆ, ದೇಶದ ನಾಗರಿಕರನ್ನು ಆರ್ಥಿಕವಾಗಿ ಸಬಲಗೊಳಿಸುತ್ತವೆ. ಬಜೆಟ್ನಲ್ಲಿ ಘೋಷಿಸಲಾದ ಸುಧಾರಣೆಗಳು ಆರ್ಥಿಕತೆಯ ವೇಗ ಹೆಚ್ಚಿಸುತ್ತವೆ' ಎಂದು ಹೇಳಿದರು.
'ಮೀನು ಸಂಸ್ಕರಣೆ ಮತ್ತು ಮಾರುಕಟ್ಟೆ ಕ್ಷೇತ್ರಗಳಲ್ಲಿ ಯುವಕರಿಗೆ ಹೆಚ್ಚು ಉದ್ಯೋಗಾವಕಾಶಗಳು ದೊರೆಯಲಿವೆ. ಸಾಂಪ್ರದಾಯಿಕ ಹಾಗೂ ನೂತನ ವಿಧಾನಗಳಿಗೆ ಪ್ರಾಶಸ್ತ್ಯ ನೀಡುವ ಮೂಲಕ ಕೃಷಿ ಕ್ಷೇತ್ರಕ್ಕೆ ಸೀತಾರಾಮನ್ ಅವರು ಹೆಚ್ಚಿನ ಆದ್ಯತೆ ನೀಡಿದ್ದಾರೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಸರ್ಕಾರ ಕೈಗೊಂಡಿರುವ ಉಪಕ್ರಮಗಳು ಭಾರತ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಉಪಯೋಗವಾಗಿದೆ' ಎಂದರು.
'ಷೇರು ಮಾರುಕಟ್ಟೆಯ ಹೂಡಿಕೆದಾರರಿಗೆ ಲಾಭಾಂಶದ ಮೇಲೆ ಶೇ 15ರಷ್ಟಿದ್ದ ತೆರಿಗೆ ಹಾಗೂ ಸರ್ಚಾರ್ಜ್ ಅನ್ನು ತಗ್ಗಿಸಬೇಕು ಅಥವಾ ತೆರಿಗೆದಾರರಿಗೆ ಅವರ ಆದಾಯ ಜೊತೆಗೆ ಲೆಕ್ಕ ಹಾಕಿ ತೆರಿಗೆ ಪಾವತಿಸಲು ಅವಕಾಶ ಕೊಡಬೇಕು ಎಂಬ ಬೇಡಿಕೆಯಿತ್ತು. ಆ ಸಲುವಾಗಿ ಲಾಭಾಂಶ ವಿತರಣಾ ತೆರಿಗೆ ರದ್ದುಪಡಿಸಲಾಗಿದ್ದು, ಇದರಿಂದ ಸ್ಟಾರ್ಟ್ ಅಪ್ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಹೆಚ್ಚು ಅನುಕೂಲವಾಗಲಿದೆ. ಈ ಬಜೆಟ್ನಿಂದ ಆಡಳಿತದ ಬದ್ಧತೆ ಅಧಿಕವಾಗಲಿದೆ' ಎಂದು ತಿಳಿಸಿದರು.