ಬೆಂಗಳೂರು, ಫೆ.01 (Daijiworld News/PY) : "ಕೇಂದ್ರ ಸರ್ಕಾರದ ಬಜೆಟ್ ಅತ್ಯಂತ ನಿರಾಶಾದಾಯವಾಗಿದೆ. ಮುಂದಿನ ದಿನಗಳಲ್ಲಿ ದೇಶದ ಪ್ರಗತಿಯ ಬಗ್ಗೆ ಆಸೆ ಇಟ್ಟುಕೊಳ್ಳದಂತಂಹ ಪರಿಸ್ಥಿತಿ ಸೃಷ್ಟಿಮಾಡಿದೆ" ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಶನಿವಾರ ಕೇಂದ್ರ ಬಜೆಟ್ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಕೇವಲ ಅಂಕಿ ಅಂಶಗಳ ಬಜೆಟ್. ಜಲಮಿಷನ್ಗೆ ಮೀಸಲಿಟ್ಟಿರುವ ಹಣದಿಂದ ಯಾವುದೇ ಜನರಿಗೆ ಅನುಕೂಲ ಆಗುವುದಿಲ್ಲ. ಕೆಲವೊಂದು ಯೋಜನೆಗಳಿಗೆ ಹೊಸ ಹೆಸರು ಇಟ್ಟಿರಬಹುದು.ಕಳೆದ 5 ವರ್ಷಗಳಲ್ಲಿ ಘೋಷಣೆಯಾಗಿರುವ ಎಷ್ಟೋ ಯೋಜನೆಗಳು ಜಾರಿಯಾಗಿಲ್ಲ. ಹಣ ಹಂಚಿಕೆಯಲ್ಲಿಯೂ ಭಾರಿ ಕಡಿತವಾಗಿದೆ" ಎಂದರು.
"ಯುವಕರಿಗೆ ಯಾವ ರೀತಿಯ ಉದ್ಯೋಗ ಕೊಡುತ್ತೇವೆ ಎಂದು ತಿಳಿಸಿಲ್ಲ. ಇಂಟರ್ನ್ಶಿಪ್ ನೀಡುವುದಾಗಿ ಹೇಳಿದ್ದಾರೆ, ಆದರೆ ಅವರಿಗೆ ಉದ್ಯೋಗ ಕೊಡುವವರು ಯಾರು. ಕಿಸಾನ್ ಉಡಾನ್ ಹೆಸರಿನಲ್ಲಿ ರೈತರನ್ನು ಆಕಾಶದ ಮೇಲೆ ಓಡಾಡಿಸುತ್ತಾರೆಯೇ" ಎಂದು ಕೇಳಿದರು.
"ಭೂ ಸ್ವಾಧೀನ ಮಾಡಿಕೊಂಡು ಯಾರಿಗೆ ಬೇಕಾದರೂ ಭೂಮಿ ನೀಡುತ್ತೇವೆ ಎನ್ನುತ್ತಿದ್ದಾರೆ. ಇದು ಮತ್ತೊಂದು ರೀತಿಯ ಪೌರತ್ವ ತಿದ್ದುಪಡಿ ಕಾಯ್ದೆಯಂತೆ ಆಗುತ್ತದೆ. ಈ ಬಜೆಟ್ ಕುಸಿಯುತ್ತಿರುವ ದೇಶದ ಆರ್ಥಿಕ ವ್ಯವಸ್ಥೆಯನ್ನು ಸರಿಪಡಿಸುವುದಿಲ್ಲ. ಬದಲಾಗಿ ಮತ್ತಷ್ಟು ಅಧೋಗತಿಗೆ ತೆಗೆದುಕೊಂಡು ಹೋಗುತ್ತದೆ" ಎಂದು ಹೇಳಿದರು.