ನವದೆಹಲಿ, ಫೆ 02 (Daijiworld News/MB) : 2020–21ನೇ ಆರ್ಥಿಕ ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಜೀವ ರಕ್ಷಣೆಗಾಗಿ 600 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ 540 ಕೋಟಿ ಮೀಸಲಿಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರೊಬ್ಬರಿಗೆ ಮಾತ್ರ ಪ್ರಸ್ತುತ 3000 ಮಂದಿಯ ಬಲಿಷ್ಠ ತಂಡ ಹೊಂದಿರುವ ಎಸ್ಪಿಜಿ (ಸ್ಪೆಷಲ್ ಸೆಕ್ಯುರಿಟಿ ಗ್ರೂಪ್) ರಕ್ಷಣೆ ನೀಡಲಾಗಿದೆ.
ಪ್ರಧಾನಿ ಮೋದಿ ಅವರಿಗೆ ಜೀವ ಬೆದರಿಕೆ ಇರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಮೋದಿಯವರಿಗೆ ವಿಶೇಷ ಭದ್ರತೆ ನೀಡಿದೆ. ಸಚಿವರು ಮತ್ತು ಅಧಿಕಾರಿಗಳನ್ನು ಎಸ್ಪಿಜಿ ತಪಾಸಣೆಯ ಬಳಿಕವೇ ಮೋದಿಯವರ ಬಳಿ ಕಳುಹಿಸಲಾಗುತ್ತಿತ್ತು.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ಈ ಹಿಂದೆ ಎಸ್ಪಿಜಿ ರಕ್ಷಣೆ ನೀಡಲಾಗಿದ್ದು ಕಳೆದ ನವೆಂಬರ್ನಲ್ಲಿ ಮರು ಪರಿಶೀಲನೆ ಮಾಡಿ ಭದ್ರತೆ ಹಿಂಪಡೆಯಲಾಗಿದೆ. ಈಗ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ಕೇಂದ್ರೀಯ ಮೀಸಲು ಪೊಲೀಸರು (ಸಿಆರ್ಪಿಫ್) ಝೆಡ್ ಪ್ಲಸ್ ಭದ್ರತೆ ನೀಡಲಾಗುತ್ತಿದೆ. ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್, ಎಚ್.ಡಿ.ದೇವೇಗೌಡ ಮತ್ತು ವಿ.ಪಿ.ಸಿಂಗ್ ಅವರಿಗೆ ನೀಡಿದ್ದ ಎಸ್ಪಿಜಿ ಭದ್ರತೆಯನ್ನೂ ಪರಿಶೀಲನೆ ಮಾಡಿ ಕೇಂದ್ರ ಹಿಂಪಡೆದಿತ್ತು.
1985ರಲ್ಲಿ ತಮ್ಮ ಭದ್ರತೆಗೆ ನಿಯೋಜನೆಗೊಂಡಿದ್ದ ಸಿಬ್ಬಂದಿಯಿಂದಲೇ ಇಂದಿರಾ ಗಾಂಧಿ ಹತ್ಯೆ ನಡೆದ ಹಿನ್ನಲೆಯಲ್ಲಿ ಅತಿ ಗಣ್ಯ ವ್ಯಕ್ತಿಗಳ ಭದ್ರತೆಗೆ ಪ್ರತ್ಯೇಕ ರಕ್ಷಣಾ ತಂಡ ಎಸ್ಪಿಜಿ ಸ್ಥಾಪನೆ ಮಾಡಲಾಗಿದೆ. 1991ರಲ್ಲಿ ರಾಜೀವ್ ಗಾಂಧಿ ಹತ್ಯೆಯ ನಂತರ ಇಡೀ ಕುಟುಂಬಕ್ಕೆ ಎಸ್ಪಿಜಿ ಭದ್ರತೆ ವಿಸ್ತರಿಸಲಾಯಿತು.
1999ರಲ್ಲಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರ ಎಸ್ಪಿಜಿ ಭದ್ರತೆಯನ್ನು ಮರುಪರಿಶೀಲನೆ ಮಾಡಲು ಆರಂಭ ಮಾಡಿತ್ತು. ವಾಜಪೇಯಿ ಸರ್ಕಾರವು 2003ರಲ್ಲಿ ಎಸ್ಪಿಜಿ ಭದ್ರತೆಯ ಅವಧಿಯನ್ನು 10 ವರ್ಷಕ್ಕೆ ಮಿತಿಗೊಳಿಸುವ ಕಾನೂನೊಂದನ್ನು ಜಾರಿ ಮಾಡಿತು. ಆ ಬಳಿಕ ಪ್ರತಿ ವರ್ಷವು ಬೆದರಿಕೆಯ ಮಟ್ಟವನ್ನು ಪರಿಶೀಲನೆ ಮಾಡಿದ ಬಳಿಕ ಭದ್ರತೆಯ ಪ್ರಮಾಣ ನಿರ್ಧಾರ ಮಾಡಲಾಗುತ್ತದೆ. ವಾಜಪೇಯಿ ಅವರು ನಿಧನರಾಗುವವರೆಗೂ ಅವರಿಗೆ ಎಸ್ಪಿಜಿ ಭದ್ರತೆ ಒದಗಿಸಲಾಗಿತ್ತು.
ಎಸ್ಪಿಜಿ ಕಾಯ್ದೆಯನ್ನು ಕಳೆದ ವರ್ಷ ಮರು ಪರಿಷ್ಕರಣೆ ಮಾಡಲಾಯಿತು. ಅದರಂತೆ ಅಧಿಕಾರದಿಂದ ನಿರ್ಗಮಿಸಿದ 5 ವರ್ಷಗಳವರೆಗೆ ಮಾತ್ರ ಮಾಜಿ ಪ್ರಧಾನಿ ಮತ್ತು ಅವರ ಕುಟುಂಬ ಸದಸ್ಯರಿಗೆ ಎಸ್ಪಿಜಿ ಭದ್ರತೆ ಒದಗಿಸುವ ನಿಯಮ ಜಾರಿ ಮಾಡಲಾಯಿತು.