ಬೆಂಗಳೂರು, ಫೆ 02 (Daijiworld News/MB) : ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಂಬ್ ಕುರಿತಂತೆ ನೀಡಿದ ಮಿಣಿ ಮಿಣಿ ಪೌಡರ್ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಅಪಹಾಸ್ಯ ಮಾಡದಂತೆ ಬೆಂಗಳೂರು ನಗರ ಸಿವಿಲ್ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಫೆಬ್ರವರಿ 1 ರ ಶನಿವಾರ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿದ್ದು ಮಿಣಿ ಮಿಣಿ ಪೌಡರ್ ಶಬ್ದ ಬಳಸಿ ಮಾಧ್ಯಮ ಹಾಗೂ ಸಾರ್ವಜನಿಕರು ಕುಮಾರಸ್ವಾಮಿಯವರ ಘನತೆ, ಸ್ಥಾನಮಾನಕ್ಕೆ, ಹೆಸರಿಗೆ ಧಕ್ಕೆ ಉಂಟಾಗುವಂತಹ ಯಾವುದೇ ಲೇಖನ ಬರೆದು ಮುದ್ರಿಸುವುದು, ಅವರನ್ನು ಅವಹೇಳನ ಮಾಡುವಂತಹ ಯಾವುದೇ ಫೋಟೋ , ವಿಡಿಯೋ ಸೃಷ್ಟಿ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದು, ವ್ಯಂಗ್ಯವಾದ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದು, ಮೇಮ್ಸ್ ಹಾಗೂ ಜಾಹೀರಾತು ಸೃಷ್ಟಿ ಮಾಡಿ ವ್ಯಂಗ್ಯ ಮಾಡುವುದನ್ನು ನಿರ್ಬಂಧಿಸಲಾಗಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕಿದ ಬಾಂಬ್ ಬಗ್ಗೆ ಹೇಳುತ್ತಾ ಈ ಮಿಣಿ ಮಿಣಿ ಪೌಡರ್ ಹೇಳಿಕೆ ನೀಡಿದ ಕುಮಾರಸ್ವಾಮಿಯವರು ಅವರು, "ಇದು ಬಾಂಬ್ ಅಲ್ಲ, ಇದು ಪಟಾಕಿ, ಅದರಲ್ಲಿ ಮಿಣಿ ಮಿಣಿ (ಹೊಳೆಯುವ) ಪೌಡರ್ ಇತ್ತು" ಎಂದು ಹೇಳಿದ್ದಾರೆ. ಈ ಹೇಳಿಕೆಯನ್ನು ಟ್ರೋಲ್ ಮಾಡಲಾಗಿತ್ತು ಹಾಗೂ ವೈರಲ್ ಆಗಿತ್ತು.
ಹಾಗೆಯೇ ದಕ್ಷಿಣ ಕನ್ನಡ ಜಿಲ್ಲೆಯ ಜೆಡಿಎಸ್ ಯುವದಳದ ಅಧ್ಯಕ್ಷ ಅಕ್ಷಿತ್ ಸುವರ್ಣ ಅವರು ಕುಮಾರಸ್ವಾಮಿ ಅವರನ್ನು ಅವಹೇಳನ ಮಾಡುತ್ತಿರುವ ಕುರಿತು ದೂರು ದಾಖಲು ಮಾಡಿದ್ದರು.