ನವದೆಹಲಿ, ಫೆ 02 (Daijiworld News/MB) : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಮಂಡಿಸಿದ ಬಜೆಟ್ ದೇಶದ ಆರ್ಥಿಕತೆಯನ್ನು ಐಸಿಯಿವಿನಿಂದ ಖಂಡಿತವಾಗಿ ಕೃತಕ ಉಸಿರಾಟ ಸ್ಥಿತಿಗೆ ಕೊಂಡೊಯ್ಯುತ್ತದೆ ಎಂದು ಪಶ್ಚಿಮ ಬಂಗಾಳದ ಹಣಕಾಸು ಸಚಿವ ಅಮಿತ್ ಮಿಶ್ರಾ ಅಭಿಪ್ರಾಯ ಪಟ್ಟಿದ್ದಾರೆ.
ಭಾರತದ ಆರ್ಥಿಕತೆ ಬಜೆಟ್ಗೂ ಮುನ್ನ ಐಸಿಯುನಲ್ಲಿತ್ತು. ಆದರೆ ಬಜೆಟ್ ನಂತರ ನೇರವಾಗಿ ಅದು ವೆಂಟಿಲೇಟರ್ಗೆ ಹೋಗಲಿದೆ. ಈ ಬಜೆಟ್ ಜನವಿರೋಧಿಯಾಗಿದೆ ಹಾಗೂ ವಿವೇಚನಾ ರಹಿತವಾಗಿದೆ ಎಂದು ಅವರು ಟೀಕೆ ಮಾಡಿದ್ದಾರೆ.
ಬಜೆಟ್ನಲ್ಲಿ ದೇಶ ಪ್ರಸ್ತುತ ಎದುರಿಸುತ್ತಿರುವ ಯಾವುದೇ ಸಮಸ್ಯೆಗಳಿಗೆ ಪರಿಹಾರ ನೀಡಿಲ್ಲ ಎಂದು ಹೇಳಿದ್ದಾರೆ.
ಜಿಡಿಪಿ ಪ್ರಗತಿಯು 11 ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು ಖಾಸಗಿ ಬಳಕೆ ಏಳು ವರ್ಷದಲ್ಲೇ ಕನಿಷ್ಠ ಮಟ್ಟ ತಲುಪಿದೆ. ಹೂಡಿಕೆ 17 ವರ್ಷದಲ್ಲೇ ಕನಿಷ್ಠ ಪ್ರಗತಿಯಾಗಿದ್ದು ಉತ್ಪಾದನೆ 15 ವರ್ಷದಲ್ಲೇ ಕನಿಷ್ಠ ಮಟ್ಟ ತಲುಪಿದೆ. ಕೃಷಿ ಕ್ಷೇತ್ರ ನಾಲ್ಕು ವರ್ಷದಲ್ಲೇ ಕನಿಷ್ಠ ಪ್ರಗತಿ ದಾಖಲಿಸಿದೆ. ಆದರೆ ಈ ಯಾವ ಕ್ಷೇತ್ರಗಳಿಗೂ ಬಜೆಟ್ ಪರಿಹಾರ ನೀಡಿಲ್ಲ. ಬದಲಾಗಿ ಕೇಂದ್ರ ಸರ್ಕಾರ ಕೃಷಿ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಅನುದಾಣವನ್ನು ಶೇಕಡ 8.9 ರಷ್ಟು ಕಡಿತ ಮಾಡಿದೆ ಎಂದು ತಿಳಿಸಿದ್ದಾರೆ.