ಲಕ್ನೋ, ಫೆ 02 (Daijiworld News/MB) : ತನ್ನ ಪತ್ನಿಯ ರುಂಡವನ್ನು ಕತ್ತರಿಸಿ ತನ್ನ ಕೈಯಲ್ಲಿ ಹಿಡಿದುಕೊಂಡು ಪತಿ ಪೊಲೀಸ್ ಠಾಣೆಗೆ ತೆರಳಿದ ಅಮಾನುಷ ಘಟನೆ ಉತ್ತರ ಪ್ರದೇಶದ ಜಹಂಗೀರ್ ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಬಹದೂರ್ ಪರ್ ಗ್ರಾಮದಲ್ಲಿ ಶನಿವಾರ ನಡೆದಿದೆ.
ಆರೋಪಿ ಪತಿಯನ್ನು ಅಖಿಲೇಶ್ ರಾವತ್ ಎಂದು ಗುರುತಿಸಲಾಗಿದ್ದು, ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಪತಿ ಪತ್ನೆ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಜನಳವಾದ ಸಂದರ್ಭದಲ್ಲಿ ಕೋಪಗೊಂಡ ಪತಿ, ಪತ್ನಿಯ ರುಂಡವನ್ನು ಕತ್ತರಿಸಿದ್ದು ಅದನ್ನು ಹಾಗೆಯೇ ಹಿಡಿದುಕೊಂಡು ಪೊಲೀಸ್ ಠಾಣೆಗೆ ಹೋಗಿದ್ದಾನೆ. ಅಷ್ಟು ಮಾತ್ರವಲ್ಲದೇ ಠಾಣೆಯಲ್ಲಿ ಪೊಲೀಸರು ಆತನ ಕೈಯಲ್ಲಿದ್ದ ರುಂಡವನ್ನು ತೆಗೆದುಕೊಳ್ಳಲು ಪ್ರಯತ್ನ ಮಾಡಿದಾಗ, ಕೂಡಲೇ ರಾಷ್ಟ್ರಗೀತೆ ಹಾಡಿದ್ದಾನೆ. ಹಾಗೆಯೇ "ಭಾರತ್ ಮಾತಾ ಕೀ ಜೈ" ಎಂಬ ಘೋಷಣೆಯನ್ನು ಕೂಗಿದ್ದಾನೆ.
ಈ ಸಂದರ್ಭದಲ್ಲಿ ಪೊಲೀಸರು ಮತ್ತು ಆತನ ನಡುವೆ ವಾಗ್ದಾಳಿ ನಡೆದಿದೆ. ಆ ಬಳಿಕ ಪೊಲೀಸರು ಆತನ ಕೈಯಿಂದ ಆ ರುಂಡವನ್ನು ವಶಕ್ಕೆ ಪಡೆದುಕೊಂಡು ಆತನನ್ನು ಬಂಧನ ಮಾಡಿದ್ದಾರೆ.