ತಿರುವನಂತಪುರ, ಫೆ.02 (Daijiworld News/PY) : ಚೀನಾದಲ್ಲಿ ಆರಂಭವಾದ ಮಾರಾಣಾಂತಿಕ ಕೊರೋನಾ ವೈರಸ್ಗೆ ದಾಳಿಯಾಗಿರುವ ಮೊದಲ ರೋಗಿಯು ಕೇರಳದಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಪತ್ತೆಯಾಗಿದ್ದು, ಇದೀಗ ಎರಡನೇ ಕೊರೊನಾ ವೈರಸ್ ರೋಗಿ ಪತ್ತೆಯಾಗಿದ್ದಾರೆ.
ಚೀನಾದಿಂದ ಮರಳಿರುವ ಕೇರಳದ ವ್ಯಕ್ತಿಯೋರ್ವನಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಈ ವ್ಯಕ್ತಿಗೆ ಸದ್ಯ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ವ್ಯಕ್ತಿಯ ಆರೋಗ್ಯದ ಪರಿಸ್ಥಿತಿ ಸ್ಥಿರವಾಗಿರುವುದಾಗಿ ತಿಳಿದುಬಂದಿದೆ.
ಕೇರಳದಲ್ಲಿ ಒಟ್ಟು 1793 ಜನರ ಮೇಲೆ ನಿಗಾ ಇರಿಸಲಾಗಿದೆ. 70 ಜನರನ್ನು ಪ್ರತ್ಯೇಕ ವಾರ್ಡ್ಗಳಲ್ಲಿ ಇರಿಸಲಾಗಿದೆ. ಉಳಿದವರಿಗೆ ಮನೆಯಲ್ಲಿಯೇ ನಿಗಾ ವಹಿಸಲಾಗಿದೆ.
ಈ ಹಿಂದೆ ವುಹಾನ್ ಯುನಿವರ್ಸಿಟಿಯಲ್ಲಿ ಓದುತ್ತಿದ್ದ ಕೇರಳದ ವಿದ್ಯಾರ್ಥಿಯಲ್ಲಿ ರೋಗ ಸೋಂಕು ಪತ್ತೆಯಾಗಿತ್ತು. ಇದು ದೇಶದ ಮೊದಲ ಕೊರೊನಾ ಸೋಂಕು ಪತ್ತೆ ಪ್ರಕರಣವಾಗಿತ್ತು.