ನವದೆಹಲಿ, ಫೆ 02 (Daijiworld News/MB) : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಮಂಡನೆ ಮಾಡಿರುವ ಬಜೆಟ್ ಟೊಳ್ಳಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕೆ ಮಾಡಿದ್ದು ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, "ರಾಹುಲ್ ಅವರು ಬಜೆಟ್ ಅರ್ಥ ಮಾಡಿಕೊಂಡಿದ್ದಾರೆಯೇ?" ಎಂದು ಪ್ರಶ್ನಿಸಿದ್ದಾರೆ.
"ನಾನು ರಾಹುಲ್ ಅವರ ಮುಂದೆ ಕುಳಿತುಕೊಂಡಿದ್ದೆ. ಬಜೆಟ್ ಭಾಷಣ ಅರ್ಧ ಭಾಗ ಮುಗಿದಾಗ ರಾಹುಲ್ ಕಣ್ಣು ಮುಚ್ಚಿ ಕುಳಿತ್ತಿದ್ದರು. ಹಣಕಾಸಿನ ಪರಿಣಾಮ ಹಾಗೂ ನೇರ ಪರೋಕ್ಷ ತೆರಿಗೆಗಳ ಬಗ್ಗೆ ಸಚಿವರು ಉಲ್ಲೇಖ ಮಾಡುತ್ತಿರುವಾಗ ರಾಹುಲ್ ಹೊರಗೆ ಹೋಗಿದ್ದರು" ಎಂದು ಹೇಳಿದ್ದಾರೆ.
"ಹಾಗೆಯೇ ಬಜೆಟ್ ಭಾಷಣದ ವೇಳೆ ನಿರ್ಮಲಾರವರು ಅಸ್ವಸ್ಥರಾದಾಗ ಗ್ಯಾಲರಿಯಲ್ಲಿ ನಿಂತುಕೊಂಡಿದ್ದ ರಾಹುಲ್ ನಗುತ್ತಿದ್ದರು. ಮಹಿಳೆಯೊಬ್ಬರು ಅಸ್ವಸ್ಥರಾದಾಗ ನೀವು ನಗುತ್ತೀರಾ?" ಎಂದು ಪ್ರಶ್ನೆ ಮಾಡಿದ್ದಾರೆ.
ಸೀತಾರಾಮನ್ ಅವರು ಅಸ್ವಸ್ಥರಾದ ಹಿನ್ನಲೆಯಲ್ಲಿ ಕೊನೆಯ ಹಂತದಲ್ಲಿ ಭಾಷಣವನ್ನು ಮುಕ್ತಾಯ ಮಾಡಿದರು. ಅವರಿಗೆ 2020-21 ಬಜೆಟ್ಅನ್ನು ಪೂರ್ಣವಾಗಿ ಹೇಳಲು ಸಾಧ್ಯವಾಗಲಿಲ್ಲ.