ಬೆಂಗಳೂರು, ಫೆ.02 (Daijiworld News/PY) : "ಸೋತವರಿಗೆ ಸಚಿವ ಸ್ಥಾನ ನೀಡುವುದಿಲ್ಲ ಎಂಬ ವಿಚಾರದ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಾಹಿತಿ ಇಲ್ಲ. ಮಾಧ್ಯಮಗಳಲ್ಲಿ ಮಾತ್ರ ನೋಡಿ ತಿಳಿದುಕೊಂಡಿದ್ದೇನೆ" ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಸಂಪುಟ ವಿಸ್ತರಣೆ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಎಂಟಿಬಿ ನಾಗರಾಜ್ ಅವರು, "ಯಾರಿಗೆ ಮಂತ್ರಿ ಸ್ಥಾನ ನೀಡಲಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟವಾಗಿ ತಿಳಿದಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರವಾಗಿ ಸಿಎಂ ಭೇಟಿಗೆ ಭಾನುವಾರ ಅವಕಾಶ ಕೇಳಿದ್ದೇನೆ. ಸಿಎಂ ಭೇಟಿ ನಂತರ ಸ್ಪಷ್ಟವಾಗಿ ತಿಳಿಯಲಿದ್ದು, ನಂತರ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ. ಸೋತವರಿಗೆ ಸಚಿವ ಸ್ಥಾನ ನೀಡುವುದಿಲ್ಲ ಎಂಬ ವಿಚಾರದ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಾಹಿತಿಯಿಲ್ಲ. ಮಾಧ್ಯಮಗಳಲ್ಲಿ ಮಾತ್ರ ನೋಡಿ ತಿಳಿದುಕೊಂಡಿದ್ದೇನೆ. ಕೇಂದ್ರ ನಾಯಕರ ಜೊತೆ ಏನು ಚರ್ಚೆಯಾಗಿದೆ ಎಂದು ತಿಳಿದಿಲ್ಲ" ಎಂದರು.
"ದೆಹಲಿಯಿಂದ ಬಂದ ಬಳಿಕ ಸಿಎಂ ಜೊತೆ ಯಾವುದೇ ಭೇಟಿ ಮಾತುಕತೆ ನಡೆಸಿಲ್ಲ. ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ, ಸಿ. ಪಿ ಯೋಗಿಶ್ವರ್ ಮಂತ್ರಿಯಾಗಲಿದ್ಧಾರೆ ಎಂಬ ಮಾತಿದೆ. 11 ಮಂದಿ ಅರ್ಹ ಶಾಸಕರು ಹಾಗೂ ಮೂಲ 3 ಬಿಜೆಪಿಗರನ್ನು ಮಂತ್ರಿ ಮಾಡುತ್ತಾರೆ ಎಂಬ ಸುದ್ದಿಯನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಅಷ್ಟು ಬಿಟ್ಟು ಬೇರೆನೂ ಸ್ಪಷ್ಟವಾದ ಮಾಹಿತಿ ತಿಳಿದಿಲ್ಲ" ಎಂದು ಹೇಳಿದರು.
"ಮಂತ್ರಿ ಸ್ಥಾನ ನೀಡಲು ಸೋಲು ಗೆಲುವು ಮಾನದಂಡವಲ್ಲ. ಗೆದ್ದವರಿಗೆ ನೀಡಿದಷ್ಟೆ ಪ್ರಾಮುಖ್ಯತೆ ಸೋತವರಿಗೂ ನೀಡಬೇಕು. ರಾಜೀನಾಮೆ ಪರ್ವ ಪ್ರಾರಂಭ ಮಾಡಿದ್ದೆ, ರಮೇಶ್ ಜಾರಕಿಹೋಳಿ ಹಾಗೂ ನಾವು. ರಾಜೀನಾಮೆ ನೀಡಿರುವ 17 ಮಂದಿಗೂ ಅಧಿಕಾರ ನೀಡಬೇಕು. 17 ಮಂದಿ ರಾಜೀನಾಮೆಯಿಂದ ಬಿಜೆಪಿ ಸರ್ಕಾರ ರಚನೆ ಹಾಗೂ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಬಚ್ಚೇಗೌಡ ಅವರ ಮಗನನ್ನು ಕಣಕ್ಕೆ ಇಳಿಸದೇ ಇದ್ದಿದ್ದರೆ ನಾನು ಸೋಲುತ್ತಿರಲಿಲ್ಲ" ಎಂದರು.
"ಬಚ್ಚೇಗೌಡ ಮಂತ್ರಿಯಾಗಿ ಸಂಸದರಾಗಿ ಪಕ್ಷ ದ್ರೋಹ ಮಾಡಿದ್ದಾರೆ. ನಾನು ಬಿಜೆಪಿ ಸೇರ್ಪಡೆಗೆ ಗ್ರೀನ್ ಸಿಗ್ನಲ್ ನೀಡಿದ ನಂತರ ಬಚ್ಚೇಗೌಡ ಉಲ್ಟಾ ಹೊಡೆದಿದ್ದರು. ಬಚ್ಚೇಗೌಡ ನನ್ನ ಜೊತೆ ನಿಂತಿದ್ದರೆ ಕನಿಷ್ಠ 50 ಸಾವಿರ ಮತಗಳಲ್ಲಿ ಗೆಲ್ಲುತ್ತಿದ್ದೆ. ಅದಕ್ಕೆ ಬಚ್ಚೇಗೌಡರ ಮೇಲೆ ಕ್ರಮಕ್ಕೆ ಪದೇ ಪದೇ ಒತ್ತಾಯಿಸುತ್ತಿದ್ದೇನೆ. ಮಂತ್ರಿಮಂಡಲ ವಿಸ್ತರಣೆ ನಂತರ ಕ್ರಮ ಸಾಧ್ಯತೆ ಇದೆ" ಎಂದರು.
"ಬಿಜೆಪಿ ಸರ್ಕಾರ ರಚನೆಯಲ್ಲಿ ಯಾರ ಯಾರ ಪಾತ್ರ ಇದೆ ಎನ್ನುವುದು ರಾಜ್ಯದ ಜನರಿಗೆ ಗೊತ್ತಿದೆ. ಸಚಿವ ಸಂಪುಟ ವಿಚಾರವಾಗಿ ಉಳಿದ ಅರ್ಹ ಶಾಸಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿಲ್ಲ. ಬಚ್ಚೇಗೌಡ ಮೊಬೈಲ್ ಸ್ವಿಚ್ ಆಫ್ ಮಾಡಿ ಪ್ರಚಾರಕ್ಕು ಬಂದಿಲ್ಲ. ಈ ವಿಷಯ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಿಗೂ ಗೊತ್ತಿದೆ. ಸಚಿವ ಸಂಪುಟ ವಿಸ್ತರಣೆಯ ಆಗುಹೋಗುಗಳ ನಂತರ ಮುಂದಿನ ನಡೆ. ಯಡಿಯೂರಪ್ಪ ನಮ್ಮ ನಾಯಕರು ನಮಗೆ ಸ್ಥಾನಮಾನ ನೀಡುವುದು ಅವರಿಗೆ ತಿಳಿದಿದೆ. ರಾಜಕಾರಣದಲ್ಲಿ ಏಳುಬೀಳುಗಳು ಸಾಮಾನ್ಯ ಇದೇನು ಹೊಸದೇನಲ್ಲ. ಪೋನಿನಲ್ಲಿ ಮಾತ್ರ ಮಾತುಕತೆ ನಡೆಸಿದ್ದೇವೆ. ಸಚಿವ ಸಂಪುಟ ವಿಸ್ತರಣೆ ನಂತರ ಮಾತನಾಡುತ್ತೇನೆ" ಎಂದು ಹೇಳಿದರು.