ಬೆಂಗಳೂರು, ಫೆ.02 (Daijiworld News/PY) : "ಸಚಿವ ಸ್ಥಾನ ತ್ಯಾಗ ಮಾಡಲು ನಾನು ಸಿದ್ಧ. ಆದರೆ ಸೋತ ವಿಶ್ವನಾಥ್ಗೆ ಮಂತ್ರಿ ಸ್ಥಾನ ನೀಡಿ" ಎಂದು ಶಾಸಕ ಮಹೇಶ್ ಕುಮಟಳ್ಳಿ ಹೇಳಿದ್ದಾರೆ.
ಸಚಿವ ಸ್ಥಾನದ ವಿಚಾರವಾಗಿ ಮಾತನಾಡಿದ ಅವರು, "ಸಿಎಂ ಬಿಎಸ್ವೈ ಅವರು ಚುನಾವಣೆ ವೇಳೆ 35 ಸಾವಿರ ಜನರ ಮುಂದೆ ನನ್ನನ್ನು ಹಾಗೂ ಶ್ರೀಮಂತ ಪಾಟೀಲ್ ಅವರನ್ನು ಮಂತ್ರಿ ಮಾಡ್ತೀನಿ ಅಂತ ಮಾತು ಕೊಟ್ಟಿದ್ರು. ಯಡಿಯೂರಪ್ಪ ಮಾತು ತಪ್ಪೋದಿಲ್ಲ ಅಂತ ವಿಶ್ವಾಸ ಇದೆ ಅಂತ ತಿಳಿಸಿದರು. ಈಗಿನ ಬೆಳವಣಿಗೆ ನನಗೆ ಗೊಂದಲವನ್ನುಂಟು ಮಾಡಿದೆ. ಚುನಾವಣೆ ಸಂದರ್ಭ ಗೆದ್ದವರಿಗೆ ಸಚಿವ ಸ್ಥಾನ ಕೊಡುತ್ತೇನೆ. ಬಿಜೆಪಿ ನಾಯಕರು ನಿಮ್ಮನ್ನ ಕೈ ಬಿಡಲ್ಲ ಎಂದಿದ್ದರು. ಈಗ ಹೆಸರು ಕೈ ಬಿಡುತ್ತಿದ್ದಾರೆ ಅನ್ನೋ ಚರ್ಚೆ ಕೇಳಿ ಬೇಸರವಾಗಿದೆ" ಎಂದರು.
"ನಾವು ಇನ್ನೂ ಸಿಎಂ ಬಳಿ ಮಾತನಾಡಿಲ್ಲ. ಸಿಎಂ ಬಳಿ ಮಾತನಾಡುತ್ತೇವೆ. ಅವರು ಕೊಟ್ಟ ಮಾತು ಮೀರೋದಿಲ್ಲ. ನೂರಾರು ಸಮಸ್ಯೆ ಎದುರಿಸಿದವರು ನಾವು . ಹುಲಿ ಬಾಯಿಗೆ ತಲೆ ಕೊಟ್ಟು ಬಂದವರು. ಈ ಸರ್ಕಾರ ನಮ್ಮ ತ್ಯಾಗದಿಂದ ಬಂದಿದೆ. ಎಲ್ಲವನ್ನೂ ಸಹಿಸಿಕೊಂಡು, ನೋವು ಪಡೆದುಕೊಂಡು ನಾವು ಶಾಸಕರಾದೆವು" ಎಂದು ಹೇಳಿದರು.
"ನೆನಪಿರಲಿ, ನಮ್ಮ ತ್ಯಾಗದಿಂಲೇ ಬಿಜೆಪಿ ಸರ್ಕಾರ ಬಂದಿದ್ದು. ಮಂತ್ರಿ ಮಾಡುವ ಮಾತು ಉಳಿಸಿಕೊಳ್ಳದಿದ್ದರೆ, ಬಿಜೆಪಿ ಹಾಗೂ ಬಿಜೆಪಿ ನಾಯಕರ ಬಗ್ಗೆ ಕೆಟ್ಟ ಸಂದೇಶ ರವಾನೆಯಾಗುತ್ತೆ. ಒಂದು ವೇಳೆ ನಾನು ಸಚಿವ ಸ್ಥಾನ ತ್ಯಾಗ ಮಾಡಬೇಕು ಅಂದರೆ ಮಾಡಲು ಸಿದ್ಧ. ಆದರೆ ಸೋತ ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಕೊಡಲೇಬೇಕು. ನಾನು ಮಂತ್ರಿ ಆಗಬೇಕು ಅನ್ನೋ ಆಸೆ ಇಲ್ಲ" ಎಂದು ತಿಳಿಸಿದರು.
"ಸೋತ ಲಕ್ಷ್ಮಣ ಸವದಿಗೆ ಡಿಸಿಎಂ ಮಾಡಿದ್ದರು. ವಿಶ್ವನಾಥ್ ಅವರನ್ನ ಯಾಕೆ ಮಾಡಬಾರದು. ಹೀಗಾಗಿ ಇಬ್ಬರು ಸೋತರು ಅಂತ ಮಾತಾಡೋದು ಬೇಡ. ನಾನು ಬಿಜೆಪಿ ಕಚೇರಿಯಲ್ಲಿ ಕಸಬೇಕಾದರು ಗುಡಿಸೋಕೆ ಸಿದ್ಧ. ಪಕ್ಷ ಸಂಘಟನೆ ಮಾಡೋಕು ಸಿದ್ಧ. ಆದರೆ ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಕೊಡಲೇಬೇಕು" ಎಂದು ಹೇಳಿದರು.