ನವದೆಹಲಿ, ಫೆ.02 (Daijiworld News/PY) : ದೆಹಲಿಗೆ ಚೀನಾದಿಂದ ಮತ್ತೊಂದು ವಿಶೇಷ ವಿಮಾನ ಬಂದಿದ್ದು, ಬೋಯಿಂಗ್ 747 ವಿಮಾನದಲ್ಲಿ ಪುನಃ 323 ಮಂದಿ ಭಾರತೀಯರು ಚೀನಾದಿಂದ ವಾಪಾಸಾಗಿದ್ದಾರೆ. ಫೆ.1 ಶನಿವಾರವಷ್ಟೇ ವುಹಾನ್ನಿಂದ 324 ಮಂದಿ ಭಾರತಕ್ಕೆ ಆಗಮಿಸಿದ್ದರು.
ಕೊರೊನಾ ವೈರಸ್ನಿಂದ ಚೀನಾದಲ್ಲಿ ಇದುವರೆಗೆ 300 ಮಂದಿ ಮೃತಪಟ್ಟಿದ್ದು, 9 ಸಾವಿರ ಸೋಂಕಿಗೆ ತುತ್ತಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.
ಬೆಳಗ್ಗಿನ ಜಾವ ಸುಮಾರು 3.10ಕ್ಕೆ ಚೀನಾದ ವುಹಾನ್ನಿಂದ ಹೊರಟಿದ್ದ ಏರ್ ಇಂಡಿಯಾ ವಿಮಾನವು ಬೆಳಗ್ಗೆ ಸುಮಾರು 9.45ಕ್ಕೆ ದೆಹಲಿಗೆ ಬಂದಿಳಿದಿದೆ. ಮುಂಜಾಗ್ರತಾ ಕ್ರಮವಾಗಿ ವಿಮಾನದ ಪ್ರತೀ ಆಸನದಲ್ಲೂ ಮಾಸ್ಕ್, ಗ್ಲೌಸ್, ಔಷಧಿಗಳನ್ನು ಇರಿಸಲಾಗಿದ್ದು, 2 ವಿಶೇಷ ವೈದ್ಯರನ್ನು ಕೂಡಾ ಜೊತೆಯಲ್ಲಿ ಕಳುಹಿಸಲಾಗುತ್ತಿದೆ. ವುಹಾನ್ನಲ್ಲಿ ವಿಮಾನಕ್ಕೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವಾಗಲೂ ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದೆ.ಒಂದು ವೇಳೆ ಯಾವುದೇ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಕಂಡುಬಂದಲ್ಲಿ ಅಂತಹ ವ್ಯಕ್ತಿಯನ್ನು ವಿಮಾನದೊಳಗೆ ಬಿಡಲಾಗುವುದಿಲ್ಲ ಎಂದು ಹೇಳಿದ್ದರು.