ಹುಬ್ಬಳ್ಳಿ, ಫೆ 02 (Daijiworld News/MB) : "ಮಾಜಿ ಸಚಿವರಾದ ಹೆಚ್.ವಿಶ್ವನಾಥ್ ಅವರು ತಾಳ್ಮೆಯಿಂದಿರಲಿ, ಮುಂದಿನ ದಿನಗಳಲ್ಲಿ ಅವರಿಗೆ ಅವಕಾಶ ದೊರೆಯುತ್ತದೆ. ಶುಕ್ರದೆಸೆಯೂ ಆರಂಭವಾಗುತ್ತದೆ" ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಲಕ್ಷ್ಮಣ ಸವದಿ ಅವರು, "ಎಂಎಲ್ಸಿ ಸ್ಥಾನಕ್ಕೆ ಈಗಾಗಲೇ ರಾಷ್ಟ್ರೀಯ ನಾಯಕರು ನನ್ನ ಹೆಸರನ್ನು ಅಧಿಕೃತಗೊಳಿಸಿದ್ದಾರೆ. ಆ ಹಿನ್ನಲೆಯಲ್ಲಿ ನಾನು ನಾಮಪತ್ರ ಸಲ್ಲಿಕೆ ಮಾಡಲಿದ್ದೇನೆ" ಎಂದು ಹೇಳಿದರು.
"ಮೊದಲು ವಿಶ್ವನಾಥ್ ಅವರು ವಿಧಾನಸಭೆ ಅಥವಾ ವಿಧಾನ ಪರಿಷತ್ಗೆ ಆಯ್ಕೆಯಾಗಬೇಕು. ಹಾಗಾಗದೆ ಅವರನ್ನು ಸಚಿವರನ್ನಾಗಿ ಮಾಡಲು ಸಾಧ್ಯವಿಲ್ಲ. ಹೆಚ್.ವಿಶ್ವನಾಥ್ ಅವರಿಗೆ ಮುಂದಿನ ದಿನಗಳಲ್ಲಿ ಅವಕಾಶಗಳು ದೊರೆಯಲಿದೆ" ಎಂದರು.
"ಮುಖ್ಯಮಂತ್ರಿಗಳು ಹೆಚ್.ವಿಶ್ವನಾಥ್ ಅವರನ್ನು ಕೂಡಾ ಮುಂದಿನ ದಿನಗಳಲ್ಲಿ ವಿಧಾನ ಪರಿಷತ್ ಆಯ್ಕೆ ಮಾಡಿ ಸಚಿವ ಸ್ಥಾನ ನೀಡುವ ಚಿಂತನೆ ನಡೆಸಿದ್ದಾರೆ. ಆರ್.ಶಂಕರ್ ಕೂಡಾ ಜೂನ್ ತಿಂಗಳಲ್ಲಿ ವಿಧಾನ ಪರಿಷತ್ ಗೆ ಆಯ್ಕೆಯಾಗಿ ಸಚಿವರಾಗುತ್ತಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ನಾನು ಯಾವುದೇ ಮನೆಯ ಸದಸ್ಯನಲ್ಲದಿದ್ದರೂ ನನ್ನನ್ನು ಪಕ್ಷ ಉಪ ಮುಖ್ಯಮಂತ್ರಿಯನ್ನಾಗಿ ಮಾಡಿತು. ಈ ಬಗ್ಗೆ ಸಾಕಷ್ಟು ಅನಾವಶ್ಯಕ ಚರ್ಚೆಗಳು ನಡೆದಿದೆ. ಆದರೆ ಎಲ್ಲದಕ್ಕೂ ಹೈಕಮಾಂಡ್ ತೆರೆ ಎಳೆದಿದೆ" ಎಂದು ಹೇಳಿದರು.