ಬೆಂಗಳೂರು, ಫೆ 02 (Daijiworld News/MB) : "ಸಂಸದ ಅನಂತ್ ಕುಮಾರ್ ಹೆಗಡೆ ಯಾರಿಗೂ ಬೇಡವಾದ ವಸ್ತು. ಬಿಜೆಪಿಗೂ ಬೇಡವಾದವರು, ಅವರು ನಿಮ್ಹಾನ್ಸ್ಗೆ ಹೋಗಿ ಪರೀಕ್ಷಿಸಿಕೊಳ್ಳಬೇಕು" ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ. ಈ ಹಿಂದೆ ಅನಂತ್ ಕುಮಾರ್ ಹೆಗಡೆ ಅವರು "ಸ್ವಾತಂತ್ರ ಹೋರಾಟಗಾರರು, ಪ್ರಗತಿಪರರು ಷಂಡರು" ಎಂದು ಹೇಳಿದ್ದರು.
ಗಾಂಧೀಜಿ ಹಾಗೂ ಕಾಂಗ್ರೆಸ್ ಕುರಿತ ಅನಂತ್ ಕುಮಾರ್ ಹೆಗಡೆ ಅವರ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ನಗರದಲ್ಲಿಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸುರೇಶ್ ಅವರು, "ಈಗಾಗಲೇ ಅನಂತ್ಕುಮಾರ್ ಹೆಗಡೆ ಅವರನ್ನು ಬಿಜೆಪಿಯವರು ಕೈಬಿಟ್ಟಿದ್ದಾರೆ. ಆ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ತಮ್ಮ ಅಸ್ತಿತ್ವ ಸಾಬೀತುಪಡಿಸಲು ಈ ರೀತಿಯಾಗಿ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಒಮ್ಮೆ ಅವರು ಬೆಂಗಳೂರಿನ ನಿಮ್ಹಾನ್ಸ್ಗೆ ಹೋಗಿ ಪರೀಕ್ಷಿಸಿಕೊಳ್ಳಬೇಕು" ಎಂದು ಲೇವಡಿ ಮಾಡಿದರು.
"ಸ್ವಾತಂತ್ರ್ಯ ಹೋರಾಟಗಾರರಿಲ್ಲದೇ ಇದ್ದಿದ್ದರೆ ಇನ್ನೂ ಬ್ರಿಟೀಷರ ಆಳ್ವಿಕೆಯಲ್ಲಿಯೇ ಭಾರತ ಇರಬೇಕಿತ್ತು. ಸಂವಿಧಾನ ಇಲ್ಲದಿದ್ದಲ್ಲಿ ಅನಂತ್ ಕುಮಾರ್ ಹೆಗಡೆಗೆ ಈ ರೀತಿ ಮಾತನಾಡಲು ವಾಕ್ ಸ್ವಾತಂತ್ರ ಎಲ್ಲಿಂದ ಬರುತ್ತಿತ್ತು? ದೇಶದಲ್ಲಿ ಹಿಟ್ಲರ್ ಸಂಸ್ಕೃತಿ ಇದೆ" ಎಂದು ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.
"ಹೆಗಡೆಯವರು ಈಗಲಾದರೂ ಬಿಜೆಪಿಗರು ಪುನಃ ತನ್ನ ಕೈಹಿಡಿಯುತ್ತಾರೆ, ಅಧಿಕಾರ ನೀಡುತ್ತಾರೆ ಎಂಬ ಆಸೆಯಿಂದ ಹೀಗೆಲ್ಲಾ ಮಾತನಾಡಿದ್ದಾರೆ. ಬಿಜೆಪಿ ರಾಷ್ಟ್ರ ನಾಯಕರಲ್ಲಿ ನೈತಿಕತೆ ಇದ್ದರೆ ಅನಂತ್ ಕುಮಾರ್ ಹೆಗಡೆಯವರನ್ನು ವಜಾ ಮಾಡಲಿ" ಎಂದು ಸಂಸದ ಸುರೇಶ್ ಅವರು ಆಗ್ರಹಿಸಿದರು.