ದಾವಣಗೆರೆ, ಫೆ.02 (Daijiworld News/PY) : "ಶಾಸಕರಾಗಿ ಆಯ್ಕೆಯಾದ ವ್ಯಕ್ತಿಗೆ ಉಪಮುಖ್ಯಮಂತ್ರಿ ಆಗುವಾಸೆ. ಡಿಸಿಎಂ ಇದ್ದವರು ಸಿಎಂ ಆಗಲು ಬಯಸುತ್ತಾರೆ. ಹಾಗಾಗಿಯೇ ಈ ಬಾರಿ ರಾಜ್ಯದಲ್ಲಿ ಮೂವರು ಡಿಸಿಎಂಗಳನ್ನು ನೋಡುತ್ತಿದ್ದೇವೆ" ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.
ದಾವಣಗೆರೆಯಲ್ಲಿ ಭಾನುವಾರ ನಡೆದ ರೋಟರಿ 36ನೇ ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿದ ಅವರು, "ರಾಜ್ಯದಲ್ಲಿ ಈಗಾಗಲೇ ಮೂವರು ಉಪಮುಖ್ಯಮಂತ್ರಿಗಳಿದ್ದಾರೆ. ಇನ್ನಷ್ಟು ಶಾಸಕರು ಆಕಾಂಕ್ಷಿಗಳಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ಜಿಲ್ಲೆಗೊಬ್ಬರು ಉಪಮುಖ್ಯಮಂತ್ರಿಯನ್ನು ಮಾಡಿ ಎನ್ನುವಂತಹ ಕಾಲ ಬರಬಹುದು" ಎಂದರು.
"ರಾಜ್ಯದಲ್ಲಿ ಈಗ ಮೂವರು ಉಪಮುಖ್ಯಮಂತ್ರಿಗಳು ಇದ್ದಾರೆ. ಇನ್ಬಷ್ಟು ಶಾಸಕರು ಆಕಾಂಕ್ಷಿಗಳು ಇದ್ದಾರೆ. ಪರಿಸ್ಥಿತಿ ಹೀಗೆಯೆ ಮುಂದುವರೆದರೆ ಮುಂದೊಂದು ದಿನ ದಾವಣಗೆರೆ, ಚಿತ್ರದುರ್ಗ, ಬೆಂಗಳೂರು ಹೀಗೆ ಜಿಲ್ಲೆಗೊಬ್ಬರನ್ನು ಉಪಮುಖ್ಯಮಂತ್ರಿ ಮಾಡಿ ಎಂದು ಒತ್ತಡ ಹೇರುವ ಕಾಲವೂ ಬರಬಹುದು" ಎಂದರು.
"ಯಾವುದೇ ವ್ಯಕ್ತಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಪ್ರಚೋದನಾಕಾರಿ ಹೇಳಿಕೆ ನೀಡಬಾರದು. ಪ್ರತಿಭಟನೆ ಮಾಡುವುದು ತಪ್ಪಲ್ಲ ಆದರೆ ಅದು ಹಿಂಸಾತ್ಮಕವಾಗಿರಬಾರದು" ಎಂದು ಹೇಳಿದರು.
"ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಬದುಕುತ್ತಿದ್ದರೂ ಸಹ ರಾಜಪ್ರಭುತ್ವ ನಮ್ಮನ್ನು ಬಿಟ್ಟು ಹೋಗಿಲ್ಲ. ಝೀರೋ ಟ್ರಾಫಿಕ್ ವ್ಯವಸ್ಥೆಯೇ ಇದಕ್ಕೆ ಸೂಕ್ತ ಉದಾಹರಣೆ. ನಮ್ಮಿಂದ ಚುನಾಯಿಸಲ್ಪಟ್ಟ ಜನಪ್ರತಿನಿಧಿಗಳು ಹೋಗುವವರೆಗೆ ನಾವು ಸುಮ್ಮನಿರಬೇಕಾ. ಇದೊಂದು ಪ್ರಜಾಪ್ರಭುತ್ವವೇ. ಈಗಲೂ ರಾಜಪ್ರಭುತ್ವದ ಸಿಂಹಾಸನ ಇದೆ. ಆದರೆ ಅದರಲ್ಲಿ ರಾಜರ ಬದಲು ಜನಪ್ರತಿನಿಧಿಗಳು ಕುಳಿತುಕೊಳ್ಳುತ್ತಿದ್ದಾರೆ" ಎಂದರು.
"ನ್ಯಾಯದಾನ ತಕ್ಷಣವೇ ಆಗಬಾರದು. ಅವಸರದ ನ್ಯಾಯ ಹೂತುಹೋಗುತ್ತದೆ. ಶೀಘ್ರವಾಗಿ ಪ್ರಕರಣಗಳು ಇತ್ಯರ್ಥವಾದರೆ ನ್ಯಾಯಾಂಗದ ಮೇಲಿನ ಗೌರವ ಕಡಿಮೆಯಾಗುತ್ತದೆ. ವಿಳಂಬವೂ ಆಗಬಾರದು. ವಿಳಂಬವಾದರೆ ಗೆದ್ದವನು ಸೋತ. ಸೋತವನು ಸತ್ತ ಎಂಬಂತೆ ಆಗುತ್ತದೆ" ಎಂದು ತಿಳಿಸಿದರು.