ರಾಯಚೂರು, ಫೆ.02 (Daijiworld News/PY) : "ನಾಯಕ ಸಮಾಜಕ್ಕೆ ಡಿಸಿಎಂ ಸ್ಥಾನ ನೀಡಬೇಕು. ಆದರೆ ಸಿಎಂ ಬಿಎಸ್ವೈ ಅವರು ಈಗ ಒತ್ತಡದ ಪರಿಸ್ಥಿತಿಯಲ್ಲಿದ್ಧಾರೆ. ಮೂರು ಜನರನ್ನು ಡಿಸಿಎಂ ಮಾಡಿದ್ದೇ ತಪ್ಪು" ಎಂದು ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಹೇಳಿದ್ದಾರೆ.
ಮಸ್ಕಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿಎಂ ಬಿ.ಎಸ್.ಯಡಿಯೂರಪ್ಪ ಸರ್ಕಾರ ಮುಂದಿನ ಮೂರು ವರ್ಷ ಪೂರ್ಣಗೊಳಿಸುತ್ತದೆ. ಸಚಿವ ಸಂಪುಟದ ವಿಸ್ತರಣೆ 2-3 ದಿನಗಳಲ್ಲಿ ಆಗುತ್ತದೆ. ಸೋತವರಿಗೂ ಸಚಿವ ಸ್ಥಾನ ನೀಡಬೇಕು. ಆದರೆ ವಿಶ್ವನಾಥ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಬಾರದೆಂದು ತಿಳಿಸಿದ್ದರು. ಮುಂದಿನ ದಿನಗಳಲ್ಲಿ ವಿಧಾನಪರಿಷತ್ ಸ್ಥಾನ ಖಾಲಿಯಾದಾಗ ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡಬಹುದು" ಎಂದರು.
"ಸಿಎಂ ಬಿಎಸ್ವೈ ಅವರು ಮೂರು ಸ್ಥಾನಗಳನ್ನು ಬಿಟ್ಟು ಸಚಿವ ಸಂಪುಟ ವಿಸ್ತರಿಸಲಿದ್ದಾರೆ. 17 ಜನರನ್ನು ಕರೆದು ಮಾತನಾಡುತ್ತೇನೆ ಎಂದಿದ್ದಾರೆ. ಆದರೆ ಇಲ್ಲಿಯವರೆಗೂ ನಮ್ಮನ್ನು ಕರೆದಿಲ್ಲ. ನಾವು 17 ಜನರು ಒಟ್ಟಾಗಿದ್ದು, ನಮ್ಮಲ್ಲಿ ಒಡಕಿಲ್ಲ. ಭಾನುವಾರ ನಾನು ಬೆಂಗಳೂರಿಗೆ ಹೋಗಲಿದ್ದೇನೆ. ನಂತರದಲ್ಲಿ ನಮಗೂ ಸಚಿವ ಸ್ಥಾನ ಸಿಗಲಿದೆ. ನ್ಯಾಯಾಲಯದಲ್ಲಿನ ಪ್ರಕರಣದಿಂದಾಗಿ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ತಡವಾಗಿದೆ" ಎಂದು ಹೇಳಿದರು.