ಬೆಳಗಾವಿ, ಫೆ.02 (Daijiworld News/PY) : "ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಸರಕಾರದಲ್ಲಿ ಭಿನ್ನಮತ ಸ್ಫೋಟವಾಗುವುದು ಖಂಡಿತ" ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಂಪುಟ ವಿಸ್ತರಣೆ ಅಂದುಕೊಂಡಷ್ಟು ಸರಳವಾಗಿಲ್ಲ. 17 ಜನ ಶಾಸಕರ ಹಂಗಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರಿದ್ದಾರೆ. ಅವರಿಗೆ ಸಮಾಧಾನ ಹೇಳುವುದು ಸಿಎಂ ಅವರ ಪ್ರಥಮ ಆದ್ಯತೆ. ಮೂಲ ಬಿಜೆಪಿ ಶಾಸಕರು ಸಚಿವರಾಗುವ ಕನಸು ತಕ್ಷಣ ನನಸಾಗುವುದಿಲ್ಲ" ಎಂದರು.
"ಮೂಲ ಬಿಜೆಪಿ ಶಾಸಕರು ತಮ್ಮ ಹಕ್ಕು ಪ್ರತಿಪಾದನೆ ಮಾಡುತ್ತಾರೆ. ಆಗ ತಾನಾಗಿಯೇ ಭಿನ್ನಮತ ಹೊರಗಡೆ ಬರುತ್ತದೆ. ಆಪರೇಶನ್ ಕಮಲ ಮಾಡಿದ್ದೇ ಒಂದು ತಪ್ಪು ಸಂದೇಶ ರವಾನೆ ಮಾಡಿದೆ. ಮುಖ್ಯಮಂತ್ರಿಗಳು ಆಪರೇಶನ್ ಕಮಲ ಮಾಡಿದ 17 ಜನ ಶಾಸಕರನ್ನು ತೃಪ್ತಿಪಡಿಸಬೇಕು. ಆಪರೇಶನ್ ಕಮಲ ಮಾಡಿದ ಬಳಿಕ ಎಲ್ಲವನ್ನೂ ಸರಿಪಡಿಸಲು ಸಾಧ್ಯವಿಲ್ಲ. ಹೀಗಾಗಿ ಮೂಲ ಬಿಜೆಪಿ ಶಾಸಕರಿಗೆ ನಿರಾಸೆ ಅನಿವಾರ್ಯ" ಎಂದು ಹೇಳಿದರು.
"ರಮೇಶ್ ನೀರಾವರಿ ಖಾತೆ ಕೇಳಿರುವುದು ಅಭಿವೃದ್ಧಿಯ ಉದ್ದೇಶದಿಂದ ಅಲ್ಲ. ಇದರ ಹಿಂದೆ ಸ್ವ ಹಿತಾಸಕ್ತಿ ಇದೆ. ಈ ಖಾತೆ ನೀಡದಿದ್ದರೆ ಪುನಃ ಸಮಸ್ಯೆ ಆರಂಭ ಮಾಡುತ್ತಾನೆ. ರಮೇಶ ಜಾರಕಿಹೊಳಿ ಒಬ್ಬ ಟ್ರಬಲ್ ಮೇಕರ್. ಇಂಥವನನ್ನು ಮುಖ್ಯಮಂತ್ರಿಗಳು ಹೇಗೆ ಸಹಿಸಿಕೊಳ್ಳುತ್ತಾರೆ ಕಾದು ನೋಡಬೇಕು" ಎಂದು ತಿಳಿಸಿದರು.
ಸಚಿವ ಸ್ಥಾನ ಸಿಗದಿದ್ದರೆ ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸುವೆ ಎಂದ ಶಾಸಕ ಮಹೇಶ್ ಕುಮಟಳ್ಳಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ಒಂದು ಪಕ್ಷಕ್ಕೆ ಹೋದ ನಂತರ ಅಲ್ಲಿನ ಸಿದ್ದಾಂತ ಒಪ್ಪಿಕೊಳ್ಳಬೇಕು. ಕಸವನ್ನೂ ಗುಡಿಸಬೇಕಾಗುತ್ತದೆ" ಎಂದರು.