ನವದೆಹಲಿ, ಫೆ.02 (Daijiworld News/PY) : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ದೆಹಲಿ ಚುನಾವಣಾ ಪ್ರಚಾರಕ್ಕೆ ಸಂಪೂರ್ಣ ತಡೆ ನೀಡಬೇಕು ಎಂದು ಆಮ್ ಆದ್ಮಿ ಪಕ್ಷವು ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶಾಹೀನ್ ಬಾಗ್ನ ಪ್ರತಿಭಟನಾಕಾರರಿಗೆ ಬಿರಿಯಾನಿ ಪೂರೈಸುತ್ತಿದ್ದಾರೆ ಎಂದು ತಮ್ಮ ಭಾಷಣದಲ್ಲಿ ಯೋಗಿ ಆದಿತ್ಯನಾಥ್ ಹೇಳಿದ್ದರು. ಈ ವಿಚಾರವಾಗಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಎಎಪಿಯ ಸಂಜಯ್ ಸಿಂಗ್ ಅವರು ದೂರು ದಾಖಲಿಸಿದ್ದು, ಪ್ರಚೋದನಕಾರಿ ಭಾಷಣ ಮಾಡುವವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಜಯ್ ಸಿಂಗ್ ಅವರು, ಚುನಾವಣಾ ಆಯೋಗವನ್ನು ಭೇಟಿ ಮಾಡಲು ಎಎಪಿ ಕಳೆದ 48 ಗಂಟೆಗಳಿಂದಲೂ ಅನುಮತಿ ಕೇಳಿದ್ದರೂ ಸಹ ಪ್ರಯೋಜನವಾಗಿಲ್ಲ. ಒಂದು ವೇಳೆ ಚುನಾವಣಾ ಆಯೋಗವು ನಮಗೆ ಭೇಟಿಗೆ ಅವಕಾಶ ಕೊಡದಿದ್ದರೆ ಚುನಾವಣಾ ಆಯೋಗದ ಕಚೇರಿ ಮುಂದೆ ಫೆ.3ರ ಸೋಮವಾರದಂದು ಧರಣಿ ಕೂರುವುದಾಗಿ ತಿಳಿಸಿದ್ದಾರೆ.