ಮೈಸೂರು, ಫೆ.02 (Daijiworld News/PY): ಸದ್ಯಕ್ಕೆ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ ಎಂದು ಸಿಎಂ ಹೇಳಲಿ ಒಪ್ಪಿಕೊಳ್ಳುತ್ತೇವೆ ಬದಲಾಗಿ ಕಾನೂನು ಪ್ರಕಾರ ಅಡ್ಡಿಯಾಗುತ್ತದೆ ಎಂಬ ನೆಪವನ್ನು ಹೇಳುವುದು ಸರಿಯಲ್ಲ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ ಎಂದು ಹೇಳಲಿ ಒಪ್ಪಿಕೊಳ್ಳುತ್ತೇವೆ. ಅದರ ಬದಲು ಕಾನೂನು ಪ್ರಕಾರ ಅಡ್ಡಿಯಾಗುತ್ತದೆ ಎಂಬ ನೆಪವನ್ನು ಹೇಳುವುದು ಸರಿಯಲ್ಲ" ಎಂದರು.
"ಸಿಎಂ ಬಿಎಸ್ವೈ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಾಗಿರುವುದು ಅವರ ಕರ್ತವ್ಯ. ಅವರ ಸಂಕಷ್ಟ ನಮಗೆ ಅರ್ಥವಾಗುತ್ತಿದೆ. ಆದರೆ, ಸುಪ್ರೀಂ ಕೋರ್ಟ್ ಆದೇಶದ ಕಾರಣ ನೀಡಿ ಸಚಿವ ಸ್ಥಾನ ನೀಡಲಾಗುವುದಿಲ್ಲ ಎಂದು ಹೇಳಿರುವುದು ಸರಿಯಲ್ಲ" ಎಂದು ಹೇಳಿದ್ದಾರೆ.
"ಬಿಜೆಪಿಯಲ್ಲಿ ಸೋತ ಲಕ್ಷ್ಮಣ್ ಸವದಿಗೆ ಡಿಸಿಎಂ ಸ್ಥಾನ ನೀಡಲಾಗಿದೆ. ಆದರೆ ನಾವು ನಿಮಗಾಗಿ ಎಲ್ಲವನ್ನು ತ್ಯಾಗ ಮಾಡಿದ್ದೇವೆ. ಅನರ್ಹಗೊಂಡಿದ್ದ ನಾವು ಚುನಾವಣೆಗೆ ನಿಂತ ಬೆನ್ನಲ್ಲೇ ಪವಿತ್ರರಾಗಿದ್ದೇವೆ. ಈ ನಿಟ್ಟಿನಲ್ಲಿ ಮಂತ್ರಿಯಾಗುವುದಕ್ಕೆ ಯಾವುದೇ ಅಡ್ಡಿ ಇಲ್ಲ" ಎಂದರು.
ಈ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ನೂತನ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ಅವರು, ಎಚ್ ವಿಶ್ವನಾಥ್ ಹಿರಿಯರಾಗಿದ್ದು ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದಿದ್ದಾರೆ.