ಬೆಳಗಾವಿ, ಫೆ.02 (Daijiworld News/PY) : "ಕೊರೋನಾ ವೈರಸ್ ನೆರೆಯ ಚೀನಾ ದೇಶದಲ್ಲಿ ವ್ಯಾಪಕವಾಗಿ ಹರಡಿದೆ. ಅದು ನಮ್ಮ ದೇಶದೊಳಗೆ ವ್ಯಾಪಿಸದಂತೆ ತಡೆಗೆ ಕೇಂದ್ರ ಆರೋಗ್ಯ ಇಲಾಖೆಯ ಸೂಚನೆಯಂತೆ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ" ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಾರಣಾಂತಿಕ ಕೊರೋನಾ ವೈರಸ್ ರಾಜ್ಯದಲ್ಲಿ ಹರಡದಂತೆ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲಾಸ್ಪತ್ರೆಗಳೂ ಸೇರಿದಂತೆ ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ವೈದ್ಯಕೀಯ ತಪಾಸಣೆ, ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದ್ದು, ವಿಶೇಷ ವಾರ್ಡ್ಗಳನ್ನು ತೆರೆಯಲಾಗಿದೆ" ಎಂದರು.
"ಚೀನಾದಿಂದ ರಾಜ್ಯಕ್ಕೆ ಬರುವ ಎಲ್ಲರಿಗೂ ವೈದ್ಯಕೀಯ ತಪಾಸಣೆಗೆ ಮಾಡಲಾಗುತ್ತಿದೆ. ವಿಮಾನ ನಿಲ್ದಾಣಗಳಲ್ಲಿ ವೈದ್ಯಕೀಯ ತಪಾಸಣೆಗೆ ತಂಡ ರಚಿಸಲಾಗಿದ್ದು, ಮುಂಜಾಗ್ರತಾ ಕ್ರಮಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಕೇಂದ್ರದ ಆರೋಗ್ಯ ಸಚಿವರು ಈಗಾಗಲೇ ಚೀನಾ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದಾರೆ. ಈಗಾಗಲೇ 13 ಮಂದಿಗೆ ತಪಾಸಣೆ ನಡೆಸಿದ್ದು, ನೆಗೆಟಿವ್ ವರದಿ ಬಂದಿದೆ. ಹಾಗೆಯೇ ರಾಜ್ಯದಲ್ಲಿ ಯಾವುದೇ ರೀತಿಯ ಮಾಸ್ಕ್ಗಳ ಕೊರತೆ ಇಲ್ಲ" ಎಂದು ತಿಳಿಸಿದರು.