ಮೈಸೂರು, ಫೆ.02 (Daijiworld News/PY) : "ಸಿಎಎ-ಎನ್ಪಿಆರ್-ಎನ್ಆರ್ಸಿಗಳನ್ನು ದೇಶದಲ್ಲಿ ಯಾವುದೇ ಕಾರಣಕ್ಕೂ ಜಾರಿ ಮಾಡಲಾಗದು. ಇದರಲ್ಲಿ ಕೇಂದ್ರ ವಿಫಲವಾಗಲಿದೆ. ಈ ಅಂಶಗಳನ್ನು ಪಕ್ಷದ ಕಾರ್ಯಕರ್ತರು ಹಳ್ಳಿ ಹಳ್ಳಿಗಳ ಜನರಿಗೆ ತಿಳಿಸುವ ಕಾರ್ಯವನ್ನು ಮಾಡಬೇಕು" ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಭಾನುವಾರ ಕಾಂಗ್ರೆಸ್ ಭವನದ ಆವರಣದಲ್ಲಿ ನಡೆದ ಅಸಂವಿಧಾನಿಕ ಹಾಗೂ ತಾರತಮ್ಯದ ಎನ್ಪಿಆರ್-ಎನ್ಆರ್ಸಿ-ಸಿಎಎ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, "ಪಕ್ಷ ಒಂದು ನಿಲುವು ತೆಗೆದುಕೊಂಡಾಗ ಕಾರ್ಯಕರ್ತರಿಗೆ ಮೊದಲು ಆ ಬಗ್ಗೆ ಸ್ಪಷ್ಟತೆ, ಬದ್ಧತೆ ಇರಬೇಕು. ಆಗ ಮಾತ್ರ ಜನರಿಗೆ ಸತ್ಯ ತಿಳಿಸಲು ಸಾಧ್ಯವಾಗುತ್ತದೆ. ಇನ್ನೂ ನಮ್ಮ ಕಾರ್ಯಕರ್ತರಿಗೆ ಗೊಂದಲವಿದೆ. ಮೃದು ಹಿಂದುತ್ವ ಎನ್ನುತ್ತಿರುವ ಕೆಲವರು ಇನ್ನೂ ಗೊಂದಲದಲ್ಲಿದ್ದಾರೆ" ಎಂದು ಹೇಳಿದರು.
"ದೇಶದಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿವೆ. ಆ ವಿಚಾರವಾಗಿ ಪ್ರಧಾನಿ ಹಾಗೂ ಬಿಜೆಪಿಯವರು ಮಾತನಾಡುವುದಿಲ್ಲ. ಮುಸ್ಲಿಮರನ್ನು ಪ್ರಚೋದಿಸಿ ಅವರನ್ನು ಬೀದಿಗಿಳಿಸಿ, ಅವರ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟುವ ಕಾರ್ಯ ಮಾಡುತ್ತಿದ್ದಾರೆ. ಆ ಮುಖಾಂತರ ರಾಜಕೀಯ ಲಾಭ ಪಡೆಯಲು ಸಂಚು ನಡೆಸಿದ್ದಾರೆ" ಎಂದರು.
ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅವರು, "ಪೌರತ್ವ ಕಾಯ್ದೆ ಹೆಸರಲ್ಲಿ ಕೇಂದ್ರ ಸರಕಾರ ಜನರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ನಡೆಸಿದ್ದು, ಇದರ ವಿರುದ್ಧ ಜನ ಜಾಗೃತರಾಗಬೇಕಿದೆ ಎಂದು ತಿಳಿಸಿದರು.