ನವದೆಹಲಿ, ಫೆ 2 (DaijiworldNews/SM): ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ, ಸಂಸದೆ ಸೋನಿಯಾ ಗಾಂಧಿ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ಅವರು ನವದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅನಾರೋಗ್ಯದ ಕಾರಣದಿಂದಾಗಿ ಶನಿವಾರ ಬಜೆಟ್ ಮಂಡನೆ ಸಂದರ್ಭದಲ್ಲಿ ಸೋನಿಯಾ ಗೈರು ಹಾಜರಾಗಿದ್ದರು. ಆದರೆ, ಭಾನುವಾರದಂದು ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋನಿಯಾ ಅವರು ಕಳೆದ ಒಂಭತ್ತು ವರ್ಷಗಳಿಂದ ಅಮೆರಿಕಾದಲ್ಲಿ ನಿಯಮಿತ ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಿದ್ದರು. ಅಲ್ಲದೆ ಅಲ್ಲೇ ಅವರು ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದರು.
ಆದರೆ, ಹಲವು ಸಮಯದ ಬಳಿಕ ಇದೀಗ ಏಕಾಏಕಿ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಆರೋಗ್ಯದ ಏರುಪೇರುಗಳ ಬಗ್ಗೆ ಭಯ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.