ನವದೆಹಲಿ, ಫೆ.03 (Daijiworld News/PY) : ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಸಮೀಪ ಗುಂಡಿನ ದಾಳಿ ನಡೆದಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಕೋರರು ಕೆಂಪು ಮೋಟರ್ಸೈಕಲ್ನಲ್ಲಿ ಬಂದಿದ್ದರು. ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರನ್ನು ಗುರಿಯಾಗಿಸಿಕೊಂಡು ಒಂದು ವಾರದಲ್ಲಿ ನಡೆಸಿದ ಮೂರನೇ ಗುಂಡಿನ ದಾಳಿ ಇದಾಗಿದೆ ಎಂದು ಜಾಮಿಯಾ ಸಮನ್ವಯ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.
ಘಟನೆಯ ಬಗ್ಗೆ ವಿವರಿಸಿದ ಪ್ರತಿಭಟನಾ ಸ್ಥಳದಲ್ಲಿದ್ದ ಅರ್ಶಾನ್ ಅಫ್ಖ್, ಇಬ್ಬರು ಬಂದೂಕುಧಾರಿಗಳು ಚಲಿಸುತ್ತಿದ್ದ ವಾಹನದ ಮೇಲಿಂದಲೇ ಗುಂಡು ಹಾರಿಸಿದರು. ಗೇಟ್ 5ರ ಬಳಿ ಮೊದಲು ಗುಂಡು ಹಾರಿಸಲಾಯಿತು. ನಂತರ ಗೇಟ್ ನಂ 1ನ್ನು ದಾಟಿ ಹೋಗುತ್ತಿರುವ ಸಂದರ್ಭ ಪುನಃ ಗುಂಡಿನ ಸದ್ದು ಕೇಳಿಸಿತು. ಅವರು ಬಂದಿದ್ದ ವಾಹನದ ಸಂಖ್ಯೆಯನ್ನು ಬರೆದುಕೊಂಡಿದ್ದೇವೆ ಎಂದರು.
ಓಖ್ಲಾ ಕಡೆಯಿಂದ ಸ್ಕೂಟಿಯಲ್ಲಿ ಬಂದ ಇಬ್ಬರು ವ್ಯಕ್ತಿಗಳು ಬಳಿಕ ಜುಲೆನಾ ಕಡೆ ಹೋದರು. ಗೇಟ್ 6ರ ಬಳಿ ಮೊದಲು ಗುಂಡು ಹಾರಿಸಿದ ಅವರು ಪುನಃ ಗೇಟ್ 1ರ ಬಳಿ ಗುಂಡು ಹಾರಿಸಿದ್ದಾರೆ ಎಂದು ಜಾಮಿಯಾ ವಿವಿ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.
ಜಾಮಿಯಾ ನಗರದ ಸ್ಟೇಷನ್ ಹೌಸ್ ಆಫೀಸರ್ ಹಾಗೂ ತಂಡ ಸ್ಥಳಕ್ಕೆ ತೆರಳಿ ಶೋಧ ಕಾರ್ಯ ನಡೆಸಿತು. ಆದರೆ, ಯಾವುದೇ ಬುಲೆಟ್ ಶೆಲ್ಗಳು ದೊರೆತಿಲ್ಲ. ಅಲ್ಲದೆ, ಬಂದೂಕುಧಾರಿಗಳು ಬಂದ ವಾಹನದ ಬಗ್ಗೆಯೂ ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದಾರೆ. ಕೆಲವರು ದ್ವಿಚಕ್ರ ವಾಹನ ಎಂದರೆ, ಇನ್ನು ಕೆಲವರು ನಾಲ್ಕು ಚಕ್ರದ ವಾಹನ ಎನ್ನುತ್ತಿದ್ದಾರೆ ಎಂದು ಆಗ್ನೇಯ ವಿಭಾಗ ಹೆಚ್ಚುವರಿ ಡಿಸಿಪಿ ಕುಮಾರ್ ಜ್ಞಾನೇಶ್ ಹೇಳಿದ್ದಾರೆ.
ವಿದ್ಯಾರ್ಥಿಗಳು ಸೇರಿದಂತೆ ಅನೇಕ ಪ್ರತಿಭಟನಾಕಾರರು ಪೊಲೀಸ್ ಠಾಣೆ ಎದುರು ಜಮಾಯಿಸಿದ್ದರು. ದೂರು ನೀಡಲು ಹೇಳಿದ್ದೇವೆ. ದೂರಿನ ಅನ್ವಯ ತನಿಖೆ ನಡೆಸಿ, ಕ್ರಮ ಕೈಗೊಳ್ಳುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.