ನವದೆಹಲಿ, ಫೆ.03 (Daijiworld News/PY) : ಭಾರತಕ್ಕೆ ಆಗಮಿಸುವ ಚೀನಾ ಪ್ರಜೆಗಳು ಹಾಗೂ ಚೀನಾದಲ್ಲಿರುವ ವಿದೇಶಿಯರಿಗೆ ನೀಡಲಾಗುತ್ತಿದ್ದ ಇ–ವೀಸಾ ಸೌಲಭ್ಯವನ್ನು ಭಾನುವಾರದಿಂದ ಅನ್ವಯವಾಗುವಂತೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಭಾರತದ ರಾಯಭಾರ ಕಚೇರಿ ತಿಳಿಸಿದೆ.
ಈಗಾಗಲೇ ಪಡೆದಿರುವ ಇ–ವೀಸಾಗಳಿಗೆ ಸಿಂಧುತ್ವ ಇರುವುದಿಲ್ಲ ಎಂದೂ ಮೂಲಗಳು ತಿಳಿಸಿದ್ದು, ಭಾರತಕ್ಕೆ ಭೇಟಿ ನೀಡಲೇಬೇಕಾದಂತಹ ಅನಿವಾರ್ಯತೆ ಇದ್ದರೆ ಬೀಜಿಂಗ್ನಲ್ಲಿರುವ ರಾಯಭಾರ ಕಚೇರಿ, ಶಾಂಘೈ ಅಥವಾ ಗ್ವಾಂಝೌನಲ್ಲಿರುವ ಭಾರತೀಯ ಕಾನ್ಸುಲೇಟ್ ಕಚೇರಿಗಳನ್ನು ಸಂಪರ್ಕಿಸುವಂತೆಯೂ ತಿಳಿಸಲಾಗಿದೆ.
ಈ ಮಧ್ಯೆ, ಫಿಲಿಪ್ಪೀನ್ಸ್ನಲ್ಲಿ ಈ ಸೋಂಕಿನಿಂದಾಗಿ 44 ವರ್ಷದ ವ್ಯಕ್ತಿಯೊಬ್ಬರು ಫೆ.1 ಶನಿವಾರದಂದು ಮೃತಪಟ್ಟಿದ್ದು, ಚೀನಾದ ಹೊರಗೆ ವರದಿಯಾಗಿರುವ ಮೊದಲ ಸಾವು ಇದಾಗಿದೆ. ಈಗಾಗಲೇ ಚೀನಾದಲ್ಲಿ ಕೊರೋನಾ ವೈರಸ್ಗೆ ಬಲಿಯಾಗಿದ್ದು, ಮೃತರ ಸಂಖ್ಯೆ ಒಟ್ಟು 305ಕ್ಕೇರಿದಂತಾಗಿದೆ.
ಕೊರೋನಾ ವೈರಸ್ ಸೋಂಕಿನಿಂದ ತತ್ತರಿಸಿರುವ ಚೀನಾದ ವುಹಾನ್ನಿಂದ 323 ಭಾರತೀಯರನ್ನು ಹೊತ್ತ ಏರ್ ಇಂಡಿಯಾದ ಎರಡನೇ ವಿಮಾನ ಫೆ.2 ಭಾನುವಾರ ಬೆಳಿಗ್ಗೆ ನವದೆಹಲಿಗೆ ಬಂದಿಳಿಯಿತು.
ಕೇರಳದಲ್ಲಿ ಈ ಸೋಂಕು ಕಾಣಿಸಿಕೊಂಡಿರುವ ಎರಡನೇ ಪ್ರಕರಣ ವರದಿಯಾಗಿದ್ದು, ರಾಜ್ಯದಲ್ಲಿ ಒಟ್ಟು ಇಬ್ಬರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.