ಚಿಕ್ಕಮಗಳೂರು, ಫೆ 03 (Daijiworld News/MB) : ನಮ್ಮ ಜನಾಂಗದವರು ಯಾರೂ ಕೂಡಾ ಬಿಜೆಪಿ ಪಕ್ಷದಲ್ಲಿಲ್ಲ. ಹಾಗಾಗಿ ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಅಷ್ಟು ಮಾತ್ರವಲ್ಲದೇ ನಾನು ಮುಖ್ಯಮಂತ್ರಿ ಯಡಿಯೂರಪ್ಪನವರ ಪ್ರೀತಿಯ ಶಿಷ್ಯ. ನನಗೂ ಸಚಿವ ಸ್ಥಾನ ಬೇಕು ಎಂದು ಜಿಲ್ಲೆಯ ಮೂಡಿಗೆರೆ ಶಾಸಕ ಕುಮಾರಸ್ವಾಮಿ ಹೇಳಿದ್ದಾರೆ.
ನಮ್ಮ ಬಲಗೈ ಸಮುದಾಯಕ್ಕೆ ಸಚಿವ ಸ್ಥಾನ ನೀಡಬೇಕೆಂದು ನಮ್ಮ ಜನಾಂಗದ ಮುಖಂಡರು ಈಗಾಗಲೇ ಮುಖ್ಯಮಂತ್ರಿ ಅವರನ್ನು ಒತ್ತಾಯ ಮಾಡಿದ್ದಾರೆ. ನಮ್ಮ ಜನಾಂಗದವರು ಬೇರೆ ಪಕ್ಷದಲ್ಲಿ ರಾಷ್ಟ್ರೀಯ ನಾಯಕರಾಗಿದ್ದಾರೆ. ನಾವು ಈ ಪಕ್ಷದಲ್ಲಿ ಬೆಳೆಯುತ್ತಿದ್ದೇವೆ. ಆದರೆ ನಮ್ಮ ಪಕ್ಷದಲ್ಲಿ ಯಾರೂ ಸಚಿವರಾಗಿಲ್ಲ. ನನಗೆ ಸಚಿವ ಸ್ಥಾನ ನೀಡಬೇಕೆಂದು ಮುಖ್ಯಮಂತ್ರಿ ಬಳಿ ಕೇಳಿದ್ದೇನೆ. ಮುಂದೆ ನೋಡೋಣ ಎಂದು ಹೇಳಿದ್ದಾರೆ. ಆದರೆ ನನಗೆ ಸಚಿವ ಸ್ಥಾನ ಬೇಕು. ಕೊಟ್ಟಲ್ಲಿ ನಾನು ನಿಭಾಯಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಎಲ್ಲರಿಗೂ ಆಸೆ ಇರುತ್ತದೆ. ನಾನು ಸಚಿವ ಸ್ಥಾನ ನೀಡಲು ಕೇಳಿದ್ದೇನೆ, ನೀಡುವುದು ಬಿಡುವುದು ಮುಖ್ಯಮಂತ್ರಿಯವರಿಗೆ ಬಿಟ್ಟ ವಿಚಾರ. ಕೊಡದಿದ್ದರೂ ಬೇಸರವಿಲ್ಲ ಎಂದು ಹೇಳಿದ್ದಾರೆ.
ನಮ್ಮ ಸಮುದಾಯದಿಂದ ಮೂರು ಜನರು ಶಾಸಕರಿದ್ದೇವೆ. ಈ ಬಾರಿ ನಮಗೆ ಹೆಚ್ಚು ನಿರೀಕ್ಷೆಯಿದೆ. ನನಗೆ ಸಚಿವ ಸ್ಥಾನ ನೀಡದಿದ್ದರೂ ಪರವಾಗಿಲ್ಲ. ನಮ್ಮ ಛಲವಾದಿ ಜನಾಂಗದ ಯಾರಿಗಾದರೂ ಸಚಿವ ಸ್ಥಾನ ನೀಡಬೇಕು ಎಂದು ಮೂಡಿಗೆರೆ ಶಾಸಕ ಕುಮಾರಸ್ವಾಮಿ ಎಂದು ಬೇಡಿಕೆ ಇಟ್ಟಿದ್ದಾರೆ.