ನವದೆಹಲಿ, ಫೆ 03 (Daijiworld News/MB) : "ಹೊಸ ವೈಯಕ್ತಿಕ ಆದಾಯ ತೆರಿಗೆಯ ಬಗ್ಗೆ ಉಂಟಾಗಿರುವ ಗೊಂದಲಗಳನ್ನು ಬಗೆಹರಿಸಲು ಶೀಘ್ರ ಸ್ಪಷ್ಟೀಕರಣ ನೀಡಲಾಗುತ್ತದೆ" ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಸ್ವತಃ ಸಚಿವರೇ ಹೊಸ ತೆರಿಗೆ ದರದ ಬಗ್ಗೆ ಸ್ಪಷ್ಟತೆಯಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದು , "ಬಹುಶಃ ಹೊಸ ತೆರಿಗೆ ವ್ಯವಸ್ಥೆಯ ಬಗ್ಗೆ ಹಣಕಾಸು ಸಚಿವಾಲಯದಿಂದಲೇ ಗೊಂದಲ ಉಂಟಾಗಿರಬಹುದು. ಹಾಗಾಗಿ ನಾವು ಸ್ಫಷ್ಟೀಕರಣ ನೀಡಲು ಆರಂಭ ಮಾಡಿದ್ದೇವೆ" ಎಂದು ಹೇಳಿದ್ದಾರೆ.
"ಸಚಿವಾಲಯವು ಹೊಸ ತೆರಿಗೆ ದರದಿಂದ ಆಗಲಿರುವ ಉಪಯೋಗಗಳ ಬಗ್ಗೆ ಲೆಕ್ಕಾಚಾರ ಮಾಡುತ್ತಿದೆ. ಅದು ಸಂಪೂರ್ಣವಾದ ನಂತರ ಎಲ್ಲರಿಗೂ ಅದನ್ನು ತಿಳಿಸುತ್ತೇವೆ. ಹೊಸ ಆದಾಯ ತೆರಿಗೆಯಲ್ಲಿ ಎಲ್ಲಾ ವಿನಾಯತಿಗಳನ್ನು ಕೈಬಿಡಲಾಗಿದೆ. ಕೆಲವು ವಿನಾಯಿತಿಗಳನ್ನು ಮಾತ್ರ ಮುಂದುವರೆಸಲಾಗುತ್ತದೆ. ಈ ಬಗ್ಗೆ ಶೀಘ್ರ ಮಾಹಿತಿ ನೀಡುತ್ತೇವೆ" ಎಂದು ತಿಳಿಸಿದ್ದಾರೆ.
"ಹೊಸ ತೆರಿಗೆ ಹಂತದಲ್ಲಿ ಕೆಳ ಮಧ್ಯಮ ವರ್ಗದವರಿಗೆ ಇದ್ದ ಅತೀ ಹೆಚ್ಚಿನ ದರವನ್ನು ಕಡಿತಗೊಳಿಸಲಾಗಿದೆ. ಜನರಿಗೆ ಹೆಚ್ಚಿನ ಹಣ ದೊರೆಯಲಿ ಎನ್ನುವುದು ಅದರ ಹಿಂದೆ ಇರುವ ಮುಖ್ಯ ಉದ್ದೇಶ. ಕ್ರಮೇಣ ಎಲ್ಲಾ ರೀತಿಯ ವಿನಾಯತಿಗಳನ್ನು ರದ್ದು ಮಾಡುಲಾಗುವುದು ಅದು ಸಾಧ್ಯವಾಗಬೇಕಾದಲ್ಲಿ ತೆರಿಗೆ ದರವು ಈಗ ಇರುವುದಕ್ಕಿಂತ ಕಡಿಮೆ ಇರಬೇಕು. ಸದ್ಯಕ್ಕೆ ಈ ಹೊಸ ತೆರೆಗೆ ದರವನ್ನು ಆಯ್ಕೆಯಾಗಿ ನೀಡಲಾಗಿದೆ, ಪ್ರಸ್ತುತ ಜಾರಿಯಲ್ಲಿರುವ ತೆರಿಗೆ ದರವನ್ನೂ ಉಳಿಸಿಕೊಳ್ಳಲಾಗಿದೆ" ಎಂದು ವಿವರಣೆ ನೀಡಿದರು.
"ಅನಿವಾಸಿ ಭಾರತೀಯರು (ಎನ್ಆರ್ಐ) ವಿದೇಶದಲ್ಲಿ ಗಳಿಸುವ ಆದಾಯಕ್ಕೆ ತೆರಿಗೆ ವಿಧಿಸುವ ಉದ್ದೇಶವಿಲ್ಲ. ಆದರೆ ಭಾರತದಲ್ಲಿ ಗಳಿಸುವ ಆದಾಯಕ್ಕೆ ತೆರಿಗೆ ಕಟ್ಟಬೇಕು. ಎನ್ಆರ್ಐಗಳು ಭಾರತದಲ್ಲಿ ಆಸ್ತಿ ಹೊಂದಿರುವುದರಿಂದ ಅವರಿಗೆ ಬರುವ ಎಲ್ಲಾ ಆದಾಯಗಳಿಗೆ ತೆರಿಗೆ ವಿಧಿಸುವ ಹಕ್ಕು ಸರ್ಕಾರಕ್ಕಿದೆ. ಅನಿವಾಸಿ ಭಾರತೀಯರು ತಮ್ಮ ಸ್ಥಾನಮಾನದ ದುರ್ಬಳಕೆ ಮಾಡಿಕೊಂಡು ತೆರಿಗೆ ವಂಚನ ಮಾಡುವುದನ್ನು ತಡೆಗಟ್ಟುವ ಸಲುವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ" ಎಂದು ನಿರ್ಮಲಾ ಅವರು ಸ್ಪಷ್ಟನೆ ನೀಡಿದ್ದಾರೆ.