ನವದೆಹಲಿ, ಫೆ 03 (Daijiworld News/MB) : ಐದು ದಿನಗಳಲ್ಲಿ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಬಳಿ ಮೂರು ಬಾರಿ ಗುಂಡಿನ ದಾಳಿ ನಡೆದಿದ್ದು ರಕ್ಷಣೆ ನೀಡುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ವಿರುದ್ಧ ನೆಟ್ಟಿಗರು ತಿರುಗಿ ಬಿದಿದ್ದು "ಅಮಿತ್ ಶಾ ಅವರು ರಾಜೀನಾಮೆ ನೀಡಲೇಬೇಕು" ಎಂಬ ವಿಷಯ ಈಗ ಟ್ವಿಟರ್ನಲ್ಲಿ ಟ್ರೆಂಡ್ ಆಗಿದೆ.
#AmitShahMustResign ಎಂಬ ಟ್ಯಾಗ್ನಲ್ಲಿ ಸುಮಾರು ಮೂರು ಸಾವಿರ ಮಂದಿ ಟ್ವೀಟ್ ಮಾಡಿದ್ದು ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಒತ್ತಾಯ ಮಾಡಿದ್ದಾರೆ.
"ಜಾಮಿಯಾ ಪ್ರತಿಭಟನೆಯಲ್ಲಿ ನಡೆದ ಪೊಲೀಸ್ ಹಿಂಸಾಚಾರ ಹಾಗೂ ಗುಂಡಿನ ದಾಳಿ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ, ಜೆಎನ್ಯುಗೆ ನುಗ್ಗಿದ ಮುಸುಕುಧಾರಿಗಳ ವಿರುದ್ಧವೂ ಕ್ರಮ ಕೈಗೊಂಡಿಲ್ಲ, ಪ್ರಚೋದನಕಾರಿ ಭಾಷಣ ಮಾಡಿದ ಅನುರಾಗ್ ಠಾಕೂರ್, ಯೋಗಿ ಆದಿತ್ಯನಾಥ್ ಅವರ ಮೇಲೂ ಶಿಸ್ತುಕ್ರಮ ಕೈಗೊಂಡಿಲ್ಲ, ಇದೆಲ್ಲವನ್ನು ನೋಡಿದಾಗ ಇದಕ್ಕೆ ಯಾರು ಬೆಂಬಲ ನೀಡುತ್ತಿದ್ದಾರೆ ಎಂದು ಸ್ಪಷ್ಟವಾಗಿ ತಿಳಿದು ಬರುತ್ತದೆ" ಎಂದು ಪ್ರತೀಕ್ ಜಾದವ್ ಎಂಬವರು ಅಮಿತ್ ಶಾ ರಾಜೀನಾಮೆ ನೀಡಿ ಎಂಬ ಟ್ಯಾಗ್ನೊಂದಿಗೆ ಟ್ವೀಟ್ ಮಾಡಿದ್ದಾರೆ.
"ಕೆಲವು ಭಯೋತ್ಪಾದಕರು ದೆಹಲಿಯಲ್ಲಿ ಬಹಿರಂಗವಾಗಿ ಗುಂಡು ಹಾರಿಸುತ್ತಿದ್ದಾರೆ. ಈ ಪ್ರಕರಣಗಳನ್ನು ಸರಿಯಾಗಿ ನಿಭಾಯಿಸುವಲ್ಲಿ ಗೃಹ ಸಚಿವ ಅಮಿತ್ ಶಾ ವಿಫಲರಾಗಿದ್ದಾರೆ. ಅವರಿಗೆ ಅವರ ಜವಾಬ್ದಾರಿ ನಿಭಾಯಿಸಲು ಆಗದಿದ್ದಲ್ಲಿ ರಾಜೀನಾಮೆ ನೀಡಲೇ ಬೇಕು" ಎಂದು ನದೀಂ ರಾಮ್ ಅಲಿ ಎಂಬವರು ಟ್ವೀಟ್ ಮಾಡಿದ್ದಾರೆ.
ಹಾಗೆಯೇ ಇನ್ನೋರ್ವ ಟ್ವೀಟಿಗ ತೌಫಿಕ್, "ಜಾಮಿಯಾದಲ್ಲಿ ಗುಂಡು ಹಾರಿಸಿದ ವ್ಯಕ್ತಿ ಹಾಗೂ ಅಮಿತ್ ಶಾ ಅವರ ಪೋಟೋದೊಂದಿಗೆ ಮೊದಲ ಚಿತ್ರದಲ್ಲಿ ಕಾಣುತ್ತಿರುವುದು ಕಲೆ ಹಾಗೂ ಎರಡನೇ ಚಿತ್ರದಲ್ಲಿ ಕಲಾವಿದ. ನಿಜವಾಗಿ ಹೋರಾಟ ನಡೆಯುತ್ತಿರುವುದು ಮೋದಿ ಕಲ್ಪನೆಯ ಹಿಂದುತ್ವ ಮತ್ತು ಗಾಂಧಿ ಕಲ್ಪನೆಯ ಹಿಂದೂ ಧರ್ಮದ ನಡುವೆ" ಎಂದು ಟ್ವೀಟ್ ಮಾಡಿದ್ದಾರೆ.