ಮಧ್ಯಪ್ರದೇಶ, ಫೆ 03 (Daijiworld News/MB) : ಚೀನಾದಲ್ಲಿ ಮೊದಲು ಪತ್ತೆಯಾದ ಕೊರೋನಾ ವೈರಸ್ ಜಗತ್ತಿನಾದ್ಯಂತ ತನ್ನ ಕರಾಳ ಹಸ್ತ ಚಾಚುತ್ತಿದ್ದು ಭಾರತದಲ್ಲೂ ಮೂವರಲ್ಲಿ ಈ ವೈರಸ್ ಪತ್ತೆಯಾಗಿದೆ. ಈ ನಡುವೆ ಮಧ್ಯಪ್ರದೇಶದ ಪಟ್ಟಣದಲ್ಲಿ ಚೀನಾದ ಹುಡುಗಿ ಜಿಹಾವೋ ಹಾಂಗ್ ಹಾಗೂ ಭಾರತದ ಉತ್ತರ ಪ್ರದೇಶದ ಹುಡುಗನಿಗೆ ಸತ್ಯಾರ್ಥ್ ಮಿಶ್ರಾ ಅವರ ವಿವಾಹವಾಗಿದೆ.
ಮದುಮಗಳು ಜಿಹಾವೋ ಹಾಂಗ್ ಹಾಗೂ ಆಕೆಯ ಕುಟುಂಬ ವಿವಾಹಕ್ಕಾಗಿ ಭಾರತಕ್ಕೆ ಬುಧವಾರ ಬಂದ ಬಳಿಕ ಅವರನ್ನು ಮಧ್ಯಪ್ರದೇಶದ ಆರೋಗ್ಯ ಇಲಾಖೆಯ ಅಧಿಕಾರಿಗಳು ಇವರನ್ನು ಪ್ರತ್ಯೇಕವಾಗಿ ಇರಿಸಿದ್ದರು.
ಈ ಕುರಿತು ಮಾತನಾಡಿದ ವೈದ್ಯರಾದ ಎ.ಕೆ. ಮಿಶ್ರಾ ಅವರು, "ಮದುಮಗಳು ಹಾಗೂ ಅವರ ಕುಟುಂಬವನ್ನು 5-6 ಜನರಿಂದ ವೈದ್ಯರ ತಂಡ ಪರೀಕ್ಷಿಸಿದೆ. ಅವರಲ್ಲಿ ಕೊರೋನಾ ವೈರಸ್ ಇರುವ ಯಾವ ಲಕ್ಷಣಗಳು ಕಂಡು ಬಂದಿಲ್ಲ. ನಾವು ಅಗತ್ಯ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ, ಅವರಲ್ಲಿ ಕೊರೋನಾ ವೈರಸ್ನ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ಅವರನ್ನು ಆ ಕೂಡಲೇ ಆಸ್ಪತ್ರೆಗೆ ದಾಖಲು ಮಾಡುತ್ತೇವೆ" ಎಂದು ಹೇಳಿದ್ದಾರೆ.
ಹಾಗೆಯೇ ಅವರು ಎಲ್ಲಾ ಪರೀಕ್ಷೆಗಳಿಗೆ ಸಹಕಾರ ನೀಡಿದ್ದಾರೆ. ಅಷ್ಟು ಮಾತ್ರವಲ್ಲದೇ ನಮ್ಮ ಈ ಕ್ರಮವನ್ನು ಪ್ರಶಂಸೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಐದಯ ವರ್ಷಗಳ ಹಿಂದೆ ಕೆನಡಾದಲ್ಲಿ ಈ ಇಬ್ಬರು ಜೋಡಿಗಳಿಗೆ ಪರಿಚಯವಾಗಿದ್ದು ಪ್ರೀತಿಸಿದ್ದು ಮನೆಯವರ ಒಪ್ಪಿಗೆ ಪಡೆದು ವಿವಾಹವಾಗಿದ್ದಾರೆ. ಈ ವಿವಾಹಕ್ಕೆ ಮದುಮಗಳ ತಂದೆ, ತಾಯಿ ಹಾಘೂ ಸಂಬಂಧಿಕರು ಇಬ್ಬರು ಬಂದಿದ್ದು ಉಳಿದಂತೆ ಬರಲಿದ್ದವರಿಗೆ ವೀಸಾ ಸಿಗದ ಹಿನ್ನಲೆಯಲ್ಲಿ ಬರಲಾಗಲಿಲ್ಲ.
ಭಾರತ ಸೇರಿದಂತೆ ಈ ವೈರಸ್ 25 ದೇಶಗಳಲ್ಲಿ ಹರಡಿದ್ದು ಈ ನಿಟ್ಟಿನಲ್ಲಿ ಭಾರತ ಚೀನಾಕ್ಕೆ ಇ- ವೀಸಾ ಸೌಲಭ್ಯವನ್ನು ಭಾನುವಾರ ತಾತ್ಕಾಲಿಕವಾಗಿ ಸ್ಥಗಿತ ಮಾಡಿದೆ. ಹಾಗೆಯೇ ಚೀನಾದಲ್ಲಿದ್ದ ಭಾರತೀಯ ಪ್ರಜೆಗಳನ್ನು ಭಾರತಕ್ಕೆ ವಾಪಾಸ್ ಕರೆದುಕೊಂಡು ಬಂದಿದ್ದು ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ.