ತಿರುವನಂತಪುರ, ಫೆ.03 (Daijiworld News/PY) : ಕೇರಳ ರಾಜ್ಯದಲ್ಲಿ ಕೊರೋನಾ ವೈರಸ್ ಎರಡನೇ ವ್ಯಕ್ತಿಯಲ್ಲಿ ಪತ್ತೆಯಾದ ಬಳಿಕ ಈ ಬಗ್ಗೆ ಮಾತನಾಡಿದ ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರು, "ಭಯಪಡುವ ಅಗತ್ಯವಿಲ್ಲ. ಎರಡು ವರ್ಷಗಳ ಹಿಂದೆ ನಿಫಾ ವೈರಸ್ ಅನ್ನು ಧೈರ್ಯವಾಗಿ ಎದುರಿಸಿದ್ದೇವೆ. ಕೊರೋನಾ ವೈರಸ್ ಅನ್ನು ಕೂಡಾ ನಿವಾರಿಸಬಲ್ಲೆವು" ಎಂದು ಹೇಳಿದ್ದಾರೆ.
ಈ ವಿಚಾರವಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಕೊರೋನಾ ವೈರಸ್ ತಡೆಗಟ್ಟುವ ಸಲುವಾಗಿ ಹೆಚ್ಚಿನ ಎಚ್ಚರಿಕೆ ಅಗತ್ಯವಿದೆ, ಆದರೆ ಇದರ ಬಗ್ಗೆ ಹೆದರುವ ಅವಶ್ಯಕತೆಯಿಲ್ಲ. ರೋಗಿಗಳತ್ತ ನಿಗಾ ವಹಿಸುವುದು ಇದಕ್ಕೆ ಉತ್ತಮವಾದ ಔಷಧಿ" ಎಂದು ತಿಳಿಸಿದ್ದಾರೆ.
"ಕೊರೋನಾ ವೈರಸ್ ಪತ್ತೆಯಾದ ಎರಡನೇ ರೋಗಿಯು ಜ.24ರಂದು ವುಹಾನ್ನಿಂದ ಮರಳಿದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದು, ಆಲಪ್ಪುಳ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪ್ರತ್ಯೇಕ ವಾರ್ಡ್ನಲ್ಲಿದ್ದಾರೆ ಹಾಗೂ ಮೊದಲ ವಿದ್ಯಾರ್ಥಿನಿ ತ್ರಿಶೂರ್ನ ವೈದ್ಯಕೀಯ ಆಸ್ಪತ್ರೆಯ ಪ್ರತ್ಯೇಕ ವಾರ್ಡ್ನಲ್ಲಿದ್ದಾರೆ. ಹಾಗೆಯೇ ಆಸ್ಪತ್ರೆಯಲ್ಲಿ ತಿರುಗಾಡುವುದು ಹಾಗೂ ರೋಗಿಗಳೊಂದಿಗೆ ಮಾತನಾಡದಂತೆ ವೈದ್ಯಕೀಯ ಅಧಿಕಾರಿಗಳು ಜನರಿಗೆ ತಿಳಿಸಿದ್ದಾರೆ" ಎಂದರು.
"ಸರ್ಕಾರವು ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಕಟ್ಟುನಿಟ್ಟಾದ ಕ್ರಮಕೈಗೊಂಡಿದ್ದು, 28 ದಿಗಳ ಕಾಲ ಮನೆಯಿಂದ ಹೊರಬಾರದಂತೆ ಆದೇಶಿಸಿದೆ. ಚೀನಾದಲ್ಲಿ ಅಧ್ಯಯನ ಮಾಡುತ್ತಿರುವ ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ರೋಗಿಗಳತ್ತ ನಿಗಾ ವಹಿಸುವುದು ಹಾಗೂ ರೋಗಿಗಳು ಸರಿಯಾದ ವಿಶ್ರಾಂತಿ ತೆಗೆದುಕೊಳ್ಳುವದು ಅತ್ಯುತ್ತಮ ಮಾರ್ಗವಾಗಿದೆ" ಎಂದು ಹೇಳಿದರು.
"ಎರಡು ವರ್ಷಗಳ ಹಿಂದೆ ಕೇರಳದಲ್ಲಿ ಪತ್ತೆಯಾಗಿದ್ದ ನಿಫಾ ವೈರಸ್ನಿಂದ ಹೇಗೆ ಆತಂಕವಾಗಿತ್ತೋ ಇದೀಗ ಕೊರೋನಾ ವೈರಸ್ ಪತ್ತೆಯಾದಾಗಲೂ ರಾಜ್ಯ ಇದೇ ಪರಿಸ್ಥಿತಿ ಎದುರಿಸುತ್ತಿದೆ. ಆದರೆ ಇದರ ಬಗ್ಗೆ ಹೆದರುವ ಅವಶ್ಯಕತೆ ಇಲ್ಲ ಸರ್ಕಾರ ಇದ್ದನ್ನು ನಿವಾರಿಸುವ ಕ್ರಮವನ್ನು ಕೈಗೊಂಡಿದೆ. ಕೊರೋನಾ ವೈರಸ್ ಪತ್ತೆಯಾದ ಹಿನ್ನೆಲೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿ ತಕ್ಷಣವೇ ವರದಿಯನ್ನು ನೀಡುವಂತೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಮನವಿ ಮಾಡಿದ್ದೇವೆ" ಎಂದರು.
ಇದೀಗ ಕೇರಳದಲ್ಲಿ ಮೂರನೇ ವ್ಯಕ್ತಿಗೆ ರಕ್ತ ಪರೀಕ್ಷೆ ಮಾಡಿದ ಸಂದರ್ಭ ವೈರಸ್ ತಗಲಿರುವುದು ತಿಳಿದು ಬಂದಿದೆ ಆರೋಗ್ಯದಲ್ಲಿ ಸುಧಾರಣೆಯಾಗಿದೆ ಎಂದು ತಿಳಿದು ಬಂದಿದೆ.