ನವದೆಹಲಿ, ಫೆ 03 (Daijiworld News/MB) : ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುತ್ತಿರುವ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಮತ್ತೊಮ್ಮೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ವಿರುದ್ಧವಾಗಿ ಮಾತನಾಡಿ ಮಹಾತ್ಮ ಗಾಂಧಿ ನೇತೃತ್ವದ ಸ್ವಾತಂತ್ರ್ಯ ಚಳವಳಿಯನ್ನು "ಡ್ರಾಮಾ" ಎಂದು ಕರೆದಿದ್ದು, ಈ ಸಂಬಂಧ ಬೇಷರತ್ ಕ್ಷಮೆಯಾಚಿಸುವಂತೆ ಮಾಜಿ ಕೇಂದ್ರ ಸಚಿವನಿಗೆ ಬಿಜೆಪಿ ಸೂಚಿಸಿದೆ ಎಂದು ವರದಿಯಾಗಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಹೋರಾಟಗಾರರಲ್ಲಿ 3 ಮಂದಿಯಿದ್ದಾರೆ. ಒಂದು ಸ್ವಾತಂತ್ರ್ಯಕ್ಕೋಸ್ಕರ ಹೋರಾಟ ಮಾಡಿದ ಕ್ರಾಂತಿಕಾರಿಗಳು, ಎರಡನೆಯದಾಗಿ ಪ್ರಖರ ಚಿಂತನೆಗಳಿಂದ ಪ್ರೇರೇಪಣೆ ನೀಡಿದವರು. ಇವರು ಕೈಗಳಲ್ಲಿ ಶಸ್ತ್ರ ಹಿಡಿದಿಲ್ಲ, ಬದಲಾಗಿ ಇತರರಲ್ಲಿ ಕ್ರಾಂತಿಯನ್ನು ತುಂಬಿದರು. ಆದರೆ ಮೂರನೆಯವರು ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆಗೆ ಹೊಡೆಯಿರಿ ಎನ್ನುವ ನಾಟಕವಾಡುವವರು" ಎಂದು ಹೇಳಿದ್ದಾರೆ.
ಅಷ್ಟು ಮಾತ್ರವಲ್ಲದೇ ಈ ನಾಯಕರನ್ನು ಯಾವ ಪೋಲೀಸರು ಹೊಡೆದಿಲ್ಲ. ಅವರ ಸ್ವಾತಂತ್ರ್ಯ ಚಳುವಳಿ ಒಂದು ದೊಡ್ಡ ನಾಟಕವಾಗಿತ್ತು. ಈ ನಾಯಕರು ಈ ಚಳವಳಿ ನಾಟಕವನ್ನು ಬ್ರಿಟಿಷರ ಅನುಮೋದನೆಯೊಂದಿಗೆ ಪ್ರದರ್ಶನ ಮಾಡಿದ್ದರು. ಇದು ನಿಜವಾದ ಹೋರಾಟವಲ್ಲ. ಇದು ಹೊಂದಾಣಿಕೆ ಸ್ವಾತಂತ್ರ್ಯ ಹೋರಾಟ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಬಿಜೆಪಿಯ ಹಿರಿಯ ನಾಯಕ ಜಗಂದಾಂಬಿಕಾ ಪಾಲ್ ಅವರು, "ಮಹಾತ್ಮ ಗಾಂಧಿ ಏನೆಂದು ವಿಶ್ವಕ್ಕೆ ತಿಳಿದಿದೆ. ಆದರೆ ಅನಂತ್ ಕುಮಾರ್ ಹೆಗಡೆ ಹೇಳಿಕೆ ಅವರ ವೈಯಕ್ತಿಕ" ಎಂದಿದ್ದಾರೆ. ಹಾಗೆಯೇ ಕೇಂದ್ರ ಸಚಿವ ಅಶ್ವನಿ ಚೌಬೆ ಅವರು, "ಮಹಾತ್ಮ ಗಾಂಧೀಜಿ ಅವರಿಗೆ ದೇಶದಲ್ಲಿ ದೊಡ್ಡ ಗೌರವವಿದೆ. ಹೆಗಡೆ ಅವರು ಈ ರೀತಿ ಹೇಳಿಕೆ ನೀಡಬಾರದಿತ್ತು" ಎಂದಿದ್ದಾರೆ.