ನವದೆಹಲಿ, ಫೆ 3 (Daijiworld News/MSP): ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ಕೇಂದ್ರದ ಮಾಜಿ ಸಚಿವ ಸ್ವಾಮಿ ಚಿನ್ಮಯಾನಂದ ಅವರಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಡಿಸೆಂಬರ್ 2019ರಲ್ಲಿ ಕಾನೂನು ವಿದ್ಯಾರ್ಥಿನಿ ಮಾಡಿದ ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ಸ್ವಾಮಿ ಚಿನ್ಮಯಾನಂದ ಅವರನ್ನು ಪೊಲೀಸರು ಬಂಧಿಸಿದ್ದರು.
ಆ ಬಳಿಕ ಕಾನೂನು ವಿದ್ಯಾರ್ಥಿನಿಯನ್ನು ಸುಲಿಗೆ ಪ್ರಕರಣದಲ್ಲಿ ಪೊಲೀಸರು ಈಕೆಯನ್ನೇ ಬಂಧಿಸಿದ್ದರು. ಸ್ವಾಮಿ ಚಿನ್ಮಯಾನಂದ ಅವರನ್ನು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ ಆರೋಪದ ಮೇಲೆ ಈಕೆ ವಿರುದ್ಧ ಕೇಸ್ ದಾಖಲಿಸಲಾಗಿತ್ತು.
73 ವರ್ಷದ ಮಾಜಿ ಸಂಸದ ಸ್ವಾಮಿ ಚಿನ್ಮಯಾನಂದ ಅವರು ಬ್ಲ್ಯಾಕ್ ಮೇಲೆ ಮಾಡಿ 1 ವರ್ಷ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಯುವತಿ ಆರೋಪಿಸಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿ ಸಾಕ್ಷ್ಯಗಳನ್ನು ಕಲೆಹಾಕಿದ್ದರು. ಇನ್ನು ಕಳೆದ 2 ತಿಂಗಳ ಹಿಂದೆ ಆಕೆಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿತ್ತು. ಈ ನಡುವೆ ಇಂದು ಅತ್ಯಾಚಾರ ಆರೋಪಿ ಸ್ವಾಮಿ ಚಿನ್ಮಯಾನಂದಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಲಾಗಿದೆ.