ಮುಂಬೈ, ಫೆ 03 (Daijiworld News/MB) : ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದದಲ್ಲಿ ಕೇಂದ್ರ ಸರ್ಕಾರವು ಕರ್ನಾಟಕದತ್ತ ಹೆಚ್ಚು ಒಲವು ತೋರುತ್ತಿದೆ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಎಲ್ಲ ರಾಜ್ಯಗಳ ರಕ್ಷಕನಾಗಿ ಕೇಂದ್ರ ಸರ್ಕಾರವು ಕಾರ್ಯ ನಿರ್ವಹಿಸಬೇಕು, ಪ್ರಸ್ತುತ ಈ ವಿಚಾರವು ಸುಪ್ರೀಂ ಕೋರ್ಟ್ ಅಂಗಳದಲ್ಲಿದ್ದು ಎರಡೂ ರಾಜ್ಯಗಳ ವಿಚಾರವನ್ನು ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರವು ಮನವರಿಕೆ ಮಾಡಿಕೊಡಬೇಕು ಎಂದು ಉದ್ಧವ್ ಠಾಕ್ರೆ ಶಿವಸೇನೆಯ ಮುಖವಾಣಿ ಸಾಮ್ನಾಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ಈ ಸಂದರ್ಶನವನ್ನು ಸಂಜಯ್ ರಾವತ್ ಅವರು ಮಾಡಿದ್ದಾರೆ.
ಕೇಂದ್ರ ಸರ್ಕಾರ ಯಾವುದೇ ಒಂದು ಪಕ್ಷದ (ರಾಜ್ಯ)ದ ನಡುವೆ ವಾದಗಳಲ್ಲಿ ಲೋಪವಿದ್ದರೆ ಅದನ್ನು ನ್ಯಾಯಾಲಯದ ಗಮನಕ್ಕೆ ತರಬೇಕು. ಆದರೆ ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರ ಕೇವಲ ಕರ್ನಾಟಕದ ವಿಚಾರಗಳನ್ನು ಮಾತ್ರ ನ್ಯಾಯಾಲಯದ ಮುಂದಿಡುತ್ತಿದೆ ಎಂದು ಅವರು ದೂರಿದ್ದಾರೆ.
ಈ ಬೆಳವಣಿಗೆ ಆಘಾತಕಾರಿ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳಬೇಕಾಗಿದೆ. ಆ ಹಿನ್ನಲೆಯಲ್ಲಿ ವಿಶೇಷ ಸಭೆ ಕರೆದು, ಸಚಿವರಾದ ಶಿವಸೇನೆಯ ಏಕನಾಥ್ ಶಿಂದೆ ಹಾಗೂ ಎನ್ಸಿಪಿಯ ಛಗನ್ ಭುಜಬಲ್ ಅವರೊಂದಿಗೆ ಚರ್ಚಿಸುತ್ತೇನೆ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರ ಗಡಿಯಲ್ಲಿರುವ ಬೆಳಗಾವಿ, ಕಾರವಾರ, ನಿಪ್ಪಾಣಿ ಮತ್ತು ಇತರ ಪ್ರದೇಶಗಳಲ್ಲಿ ಕರ್ನಾಟಕ ಸರ್ಕಾರ ಮರಾಠಿ ಭಾಷಿಕರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಟೀಕೆ ಮಾಡಿದ್ದಾರೆ.
ಕರ್ನಾಟಕದಲ್ಲಿರುವ ಮರಾಠಿ ಭಾಷಿಕರಿಗೆ ನ್ಯಾಯ ಒದಗಿಸಲು ಪಕ್ಷಾತೀತ ಹೋರಾಟ ನಡೆಸಬೇಕು. ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಮಹಾರಾಷ್ಟ್ರದ ಎಲ್ಲ ಸಂಸದರೂ ಈ ಕುರಿತು ಮಾತನಾಡಬೇಕು ಎಂದು ಉದ್ಧವ್ ಈ ಹಿಂದೆ ಕರೆ ನೀಡಿದ್ದರು.
ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, "ಕರ್ನಾಟಕದ ಒಂದು ಇಂಚು ಜಾಗವನ್ನೂ ಬೇರೆ ರಾಜ್ಯಗಳಿಗೆ ನೀಡುವ ಪ್ರಶ್ನೆಯಿಲ್ಲ" ಎಂದು ಹೇಳಿದ್ದರು.
ಕೆಲ ದಿನಗಳ ಹಿಂದಷ್ಟೇ ಬೆಳಗಾವಿಗೆ ಭೇಟಿ ನೀಡಿದ್ದ ಸಂಜಯ್ ರಾವುತ್, 14 ವರ್ಷಗಳಿಂದ ಗಡಿ ವಿವಾದ ಸುಪ್ರೀಂ ಕೋರ್ಟ್ನಲ್ಲಿದೆ. ಎರಡೂ ರಾಜ್ಯಗಳು ಸುಪ್ರೀಂ ಕೋರ್ಟ್ ನೀಡುವ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದರು.
ಎನ್ಸಿಪಿ ನಾಯಕ ಶರದ್ ಪವಾರ್ ಸಮಕ್ಷಮ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಸಭೆ ಸೇರಿ ವಿವಾದ ಪರಿಹರಿಸಿಕೊಳ್ಳಬೇಕು ಎಂದಿದ್ದರು.