ನವದೆಹಲಿ, ಫೆ 03 (Daijiworld News/MB) : ಜ್ವರ ಇದೆ ಎಂದು ಆಂಧ್ರಪ್ರದೇಶದ ಸಾಫ್ಟ್ ವೇರ್ ಎಂಜಿನಿಯರ್ಳನ್ನು ಏರ್ ಇಂಡಿಯಾ ವಿಮಾನದಲ್ಲಿ ಕರೆತರದೆ ಚೀನಾದಲ್ಲಿಯೇ ಬಿಟ್ಟು ಬಂದಿರುವ ಪ್ರಸಂಗ ಇದೀಗ ಬೆಳಕಿಗೆ ಬಂದಿದೆ.
ಆಂಧ್ರದಲ್ಲಿರುವ ಜ್ಯೋತಿಯ ಕುಟುಂಬ
ಕೊರೋನಾ ವೈರಸ್ ಹರಡಿದ ಹಿನ್ನಲೆಯಲ್ಲಿ ವುಹಾನ್ ನಗರ ಸೇರಿದಂತೆ ಚೀನಾದ ಹಲವು ಕಡೆಗಳಲ್ಲಿ ಇರುವ ಎಲ್ಲಾ ಭಾರತೀಯರನ್ನು ಕರೆತರಲು ಭಾರತ ಸರ್ಕಾರದ ವತಿಯಿಂದ ಎರಡು ವಿಮಾನಗಳನ್ನು ಚೀನಾಕ್ಕೆ ಕಳುಹಿಸಿತ್ತು. ಈ ಸಮಯದಲ್ಲಿ ಮೊದಲ ವಿಮಾನದಲ್ಲಿ 323 ಮಂದಿಯನ್ನು ಹಾಗೂ ಎರಡನೆ ವಿಮಾನದಲ್ಲಿ 324 ಮಂದಿ ಪ್ರಯಾಣಿಕರನ್ನು ಕರೆತರಲಾಗಿತ್ತು.
ವುಹಾನ್ ನಲ್ಲಿಯೇ ನೆಲೆಸಿದ್ದ ಆಂಧ್ರಪ್ರದೇಶದ ಆನೆಮ್ ಜ್ಯೋತಿ ಎಂಬ ಮಹಿಳೆ ಶುಕ್ರವಾರವೇ ರಾಯಭಾರ ಕಚೇರಿಯನ್ನು ಸಂಪರ್ಕ ಮಾಡಿ ತಾನು ಭಾರತಕ್ಕೆ ಹಿಂದಿರುಗುವುದಾಗಿ ಹೇಳಿದ್ದರು. ಆದರೆ, ರಾಯಭಾರ ಕಚೇರಿಯಲ್ಲಿ ವೈದ್ಯಕೀಯ ತಪಾಸಣೆ ಮಾಡಿದಾಗ ಜ್ಯೋತಿಗೆ ಜ್ವರ ಇರುವುದು ತಿಳಿದು ಬಂದಿದೆ. ಈ ಕಾರಣದಿಂದಾಗಿ ಆಕೆಯನ್ನು ಎರಡನೇ ವಿಮಾನದಲ್ಲಿ ಕರೆದೊಯ್ಯುವುದಾಗಿ ತಿಳಿಸಲಾಗಿತ್ತು.
ಆದರೆ ಶನಿವಾರ ಎರಡನೆ ವಿಮಾನ ಬಂದಾಗಲೂ ಜ್ಯೋತಿ ಅವರನ್ನು ಕರೆದೊಯ್ಯಲು ನಿರಾಕರಿಸಲಾಗಿದ್ದು ಈಗ ಚೀನಾದಿಂದ ಭಾರತಕ್ಕೆ ಬರಲು ಸಾಧ್ಯವಾಗದೆ ತನ್ನನ್ನು ಭಾರತಕ್ಕೆ ಕರೆದೊಯ್ಯುವಂತೆ ಜ್ಯೋತಿ ತನ್ನ ಮನೆಯವರಿಗೆ ಕೇಳಿಕೊಂಡಿದ್ದಾರೆ.
ಈಗ ಆಂಧ್ರದಲ್ಲಿರುವ ಆಕೆಯ ಕುಟುಂಬದವರು ತಮ್ಮ ಮಗಳನ್ನು ಭಾರತಕ್ಕೆ ಕಳುಹಿಸಿ ಕರೆದುಕೊಂಡು ಬರುವಂತೆ ಕೇಂದ್ರಸರ್ಕಾರ ಹಾಗೂ ಆಂಧ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಅನೆಮ್ ಜ್ಯೋತಿ, ತಾನು ಏರ್ ಇಂಡಿಯಾದ ವಿಮಾನದ ಮೂಲಕ ತೆರಳಲು ಹೋದಾಗ ನನಗೆ ಪ್ರವೇಶ ನಿರಾಕರಿಸಿ ಎರಡನೇ ವಿಮಾನದಲ್ಲಿ ಕರೆದೊಯ್ಯಲಾಗುವುದು ಎಂದರು. ಬಳಿಕ ಎರಡನೆ ವಿಮಾನದಲ್ಲಿಯೂ ನನಗೆ ಅವಕಾಶ ಕೊಡಲಿಲ್ಲ. ಕಾರಣ ನನಗೆ ಆ ಸಮಯದಲ್ಲಿ ಅತಿ ಹೆಚ್ಚು ಜ್ವರ ಕಾಣಿಸಿಕೊಂಡಿತ್ತು ನನಗೆ ಈಗ ಯಾವುದೇ ರೀತಿಯ ಕೊರೋನಾ ವೈರಸ್ ಇಲ್ಲ ನನ್ನನ್ನು ಭಾರತಕ್ಕೆ ಕರೆದೊಯ್ಯಿರಿ ಎಂದು ಮನವಿ ಮಾಡಿದ್ದಾರೆ.
ಇಬ್ಬರು ಆಂಧ್ರಪ್ರದೇಶದವರೂ ಸೇರಿದಂತೆ ಇಡೀ ಆಂಧ್ರದಿಂದ ತೆರಳಿದ್ದ ತಂಡ ವುಹಾನ್ ನಲ್ಲಿ ಸಿಲುಕಿಕೊಂಡಿದ್ದು, ಕೊರೋನಾ ವೈರಸ್ ತಮಗೆ ತಗುಲದ ಕಾರಣ ಚೀನಾ ಸರ್ಕಾರ ಕೂಡ ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ. ಅತಂತ್ರರಾಗಿರುವ ನಮ್ಮನ್ನು ಇಲ್ಲಿಂದ ಕರೆದೊಯ್ಯುವಂತೆ ಕೋರಿದ್ದಾರೆ.
ಮಗಳು ಅನೆಮ್ ಜ್ಯೋತಿಗೆ ಫೆ.18ಕ್ಕೆ ಮದುವೆ ನಿಶ್ಚಯವಾಗಿದೆ. ನಮ್ಮ ಮಗಳು ಆರೋಗ್ಯವಾಗಿದ್ದಾಳೆ. ಆಕೆಗೆ ಯಾವುದೇ ವೈರಸ್ ತಗುಲಿಲ್ಲ. ಅಲ್ಲಿನ ವಾತಾವರಣದಿಂದ ಆಕೆಗೆ ಸ್ವಲ್ಪ ಜ್ವರ ಕಾಣಿಸಿಕೊಂಡಿರಬಹುದು. ಆಕೆಯನ್ನು ಭಾರತಕ್ಕೆ ಕರೆತನ್ನಿ ಎಂದು ಕೇಂದ್ರಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಆಂಧ್ರದ ಉದ್ಯೋಗಿಯೂ ಸೇರಿದಂತೆ 58 ಮಂದಿ ಟಿಎಲ್ ಸಿ ಸಾಫ್ಟ್ ವೇರ್ ಸಂಸ್ಥೆಯ ಉದ್ಯೋಗಿಗಳು ವುಹಾನ್ ನಗರದಲ್ಲಿ ಸಿಲುಕಿಕೊಂಡಿದ್ದಾರೆ ವರದಿ ತಿಳಿಸಿದೆ.
ಕೊರೋನಾ ವೈರಸ್ನಿಂದ ನಲುಗಿರುವ ಚೀನಾದಿಂದ 7 ಮಂದಿ ಮಾಲ್ಡೀವ್ ಪ್ರಜೆಗಳೂ ಸೇರಿದಂತೆ 323 ಮಂದಿ ಭಾರತೀಯರನ್ನು ಒಳಗೊಂಡ ಎರಡನೇ ತಂಡವನ್ನು ಭಾನುವಾರ ವಿಮಾನದ ಮೂಲಕ ಕರೆತರಲಾಗಿದೆ. ಶನಿವಾರ ಬೆಳಗಿನ ಜಾವ 324 ಮಂದಿ ಭಾರತೀಯರನ್ನು ಒಳಗೊಂಡ ಮೊದಲ ತಂಡವನ್ನೂ ಭಾರತಕ್ಕೆ ಕರೆತರಲಾಗಿದೆ. ಇವರೆಲ್ಲರನ್ನೂ ದೆಹಲಿಯಲ್ಲಿ ಎಲ್ಲಾ ರೀತಿಯ ತಪಾಸಣೆಗೆ ಒಳಪಡಿಸಲಾಗುತ್ತಿದೆ.