ಹುಬ್ಬಳ್ಳಿ, ಫೆ 04 (Daijiworld News/MB) : "ಅನಂತಕುಮಾರ ಹೆಗಡೆಗೆ ಮಾನ, ಮರ್ಯಾದೆ ಇಲ್ಲ. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಸಂವಿಧಾನದ ಬಗ್ಗೆ ಅವರಿಗೆ ಕನಿಷ್ಠ ಗೌರವ ಇಲ್ಲ" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇಂಥವರು ಸಂವಿಧಾನ ಓದಿ, ಅರ್ಥ ಮಾಡಿಕೊಳ್ಳದೆ ಹೇಗೆ ಸಂಸದರಾಗುತ್ತಾರೋ ಗೊತ್ತಿಲ್ಲ. ಸಂವಿಧಾನ ಇಲ್ಲದಿದ್ದರೆ ಇವರು ಸಂಸದರಾಗಲು ಸಾಧ್ಯವಿತ್ತಾ?" ಎಂದು ಪ್ರಶ್ನಿಸಿದ್ದಾರೆ.
"ಇವರು ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿದ ಎಲ್ಲಾ ಸಂದರ್ಭದಲ್ಲಿ ಅವರ ವಿರುದ್ಧ ಕ್ರಮತೆಗೆದುಕೊಳ್ಳಬೇಕಾಗಿತ್ತು" ಎಂದು ಅಭಿಪ್ರಾಯಪಟ್ಟರು.
"ಬ್ರಿಟಿಷರು ಉಪವಾಸಕ್ಕೆ ಭಯ ಪಟ್ಟು ಓಡಿಹೋಗಿಲ್ಲ ಎಂಬ ಅನಂತ್ ಕುಮಾರ್ ಹೆಗಡೆ ಹೇಳಿಕೆಯನ್ನು ಖಂಡಿಸಿದ ಅವರು, "ಹೆಗಡೆಯವರು ಗಾಂಧಿ, ನೆಹರೂ, ಪಟೇಲ್ ಅವರೊಂದಿಗೆ ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗಿದ್ದರಲ್ವ ಹಾಗಾಗಿ ತಮ್ಮ ಅನುಭವವನ್ನು ಹೇಳುತ್ತಿದ್ದಾರೆ" ಎಂದು ವ್ಯಂಗ್ಯ ಮಾಡಿದರು.