ನವದೆಹಲಿ, ಫೆ 04 (Daijiworld News/MB) : "ಜೈ ಶ್ರೀ ರಾಮ್ ಎಂಬ ಘೋಷಣೆ ಯಾವುದೇ ಧರ್ಮದ ಸಂಕೇತವಲ್ಲ, ಇದು ದೇಶದ ಸಂಸ್ಕೃತಿ. ವಿರೋಧ ಪಕ್ಷಗಳು ವೋಟ್ ಬ್ಯಾಂಕ್ ರಾಜಕೀಯ ಮಾಡುವುದನ್ನು ಬಿಟ್ಟು ಸಂಸತ್ತಿನಲ್ಲಿ ಜೈ ಶ್ರೀ ರಾಮ್ ಎಂದು ಪಠಿಸಬೇಕು" ಎಂದು ಬಿಜೆಪಿ ಸಂಸದ ಪರ್ವೇಶ್ ವರ್ಮಾ ಹೇಳಿದ್ದಾರೆ.
ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾರ್ಪಣೆ ಗೊತ್ತುವಳಿ ಚರ್ಚೆಯಲ್ಲಿ ಮಾತನಾಡಿದ ಅವರು, "ಸಂವಿಧಾನದ ಮೂಲ ಪ್ರತಿಯಲ್ಲಿ ಶ್ರೀ ರಾಮ, ಕೃಷ್ಣ ಹಾಗೂ ಹನುಮಂತನ ಚಿತ್ರವಿತ್ತು" ಎಂದರು.
ವರ್ಮಾ ಅವರು ಮಾತು ಆರಂಭಿಸಿದಾಗಲೇ ವಿಪಕ್ಷದ ಬಹುತೇಕ ಸದಸ್ಯರು ಸಭಾತ್ಯಾಗ ಮಾಡಿದರು. ವಿರೋಧ ಪಕ್ಷದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ವರ್ಮಾ ಅವರು "ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ. ನೀವು ಜೈ ಶ್ರೀ ರಾಮ್ ಎಂದು ಪಠಿಸಿದರೆ ನಿಮ್ಮ ಎಲ್ಲಾ ಪಾಪಗಳು ಪರಿಹಾರವಾಗುತ್ತದೆ" ಎಂದು ಹೇಳಿದರು.
"ಶಾಹೀನ್ ಬಾಗ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧವಾಗಿ ಪ್ರತಿಭಟನೆ ಮಾಡುವವರು ಅಸ್ಸಾಂ ಹಾಗೂ ಜಮ್ಮು ಕಾಶ್ಮೀರ ಭಾರತದಿಮದ ಪ್ರತ್ಯೇಕವಾಗಬೇಕೆಂದು ಬಯಸುವವರು. ಅವರು ಜಿನ್ನಾರ ಆಝಾದಿ ಬಯಸುವವರು. ಇದು ರಾಜೀವ್, ಫಿರೋಝ್ಖಾನ್ ಅವರು ಸರ್ಕಾರವಲ್ಲ. ಪೌರತ್ವ ಕಾಯ್ದೆಯನ್ನು ಹಿಂದಕ್ಕೆ ಪಡೆಯುವ ವಿಷಯವೇ ಇಲ್ಲ" ಎಂದರು.
ರಾಜೀವರ ತಾಯಿ ಇಂದಿರಾ ನೆಹರು ಅವರು ಮುಸ್ಲಿಮ್ ವ್ಯಕ್ತಿ ಫಿರೋಝ್ ಖಾನ್ ಅವರನ್ನು ಮದುವೆಯಾಗಿದ್ದರು ಎಂಬ ಪ್ರಮಾಣೀಕರಿಸದ ವರದಿಯನ್ನು ಉಲ್ಲೇಖಿಸಿ ವರ್ಮಾ ಅವರು ಈ ಹೇಳಿಕೆಯನ್ನು ನೀಡಿದರು.