ನವದೆಹಲಿ, ಫೆ 04 (Daijiworld News/MB) : "ನಾನೊಬ್ಬ ನಿಷ್ಠೆಯ ಹಿಂದೂ. ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಬಿಜೆಪಿ ಯಾಕೆ ಯತ್ನ ಮಾಡುತ್ತಿದೆ ಎಂದು ನನಗೆ ತಿಳಿಯುತ್ತಿಲ್ಲ, ನಾನು ನಿಷ್ಠೆಯ ಹಿಂದೂ, ಹನುಮಾನ್ ಭಕ್ತ" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಸೋಮವಾರ ಮಾಧ್ಯಮವೊಂದು ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, "ನಾನು ಹನುಮಾನ್ ಭಕ್ತ" ಎಂದು ಹೇಳಿದ್ದು ಈ ಸಂದರ್ಭದಲ್ಲಿ ಹನುಮಾನ್ ಚಾಲೀಸ ಹೇಳಲು ಸಂದರ್ಶನಕಾರರು ಹೇಳಿದಾಗ ಅವರು, "ನನ್ನ ಸ್ವರ ಚೆನ್ನಾಗಿಲ್ಲ ಕ್ಷಮಿಸಿ, ಆದರೆ ಹಾಡುವ ಪ್ರಯತ್ನ ಮಾಡುತ್ತೇನೆ" ಎಂದು ಹೇಳಿ ಹನುಮಾನ್ ಚಾಲೀಸ ಹಾಡಿದರು. ಈ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದವರು ಚಪ್ಪಾಳೆಯ ಮುಖಾಂತರ ಅವರಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
"ದೆಹಲಿಯಲ್ಲಿ ಬಿಜೆಪಿಯು ಶಾಹೀನ್ಬಾಗ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯ ವಿಷಯವನ್ನಿಟ್ಟುಕೊಂಡೇ ಚುನಾವಣೆಯ ಪ್ರಚಾರ ನಡೆಸುತ್ತಿದ್ದು ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಯತ್ನ ಮಾಡುತ್ತಿದೆ" ಎಂದು ಅವರು ದೂರಿದರು.
ಹಾಗೆಯೇ ಮತ್ತೊಂದು ಮಾಧ್ಯಮದ ಸಂದರ್ಶನದಲ್ಲಿ ಮಾತನಾಡಿದ ಅವರು, "ಶಾಹೀನ್ಬಾಗ್ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಮಾತ್ರ ಬಿಜೆಪಿ ಮಾತನಾಡುತ್ತಿದೆ. ಯಾಕೆಂದರೆ ಅವರಿಗೆ ಬೇರೆ ಯಾವ ವಿಷಯವೇ ಇಲ್ಲ. ಹಾಗಾಗಿ ನನ್ನನ್ನು ಅವರು ಭಯೋತ್ಪಾದಕ ಎಂದು ಹೇಳುತ್ತಿದ್ದಾರೆ, ಪ್ರತಿಭಟನಕಾರರೊಂದಿಗೆ ಮಾತನಾಡಿ ಅವರನ್ನು ರಸ್ತೆಯಿಂದ ತೆರವುಗೊಳಿಸುವುದು ಬಿಜೆಪಿ ನೇತೃತ್ವದ ಕೇಂದ್ರದ ಕರ್ತವ್ಯ" ಎಂದು ಹೇಳಿದ್ದಾರೆ.
ಹಾಗೆಯೇ ಶಾಹೀನ್ ಬಾಗ್ಗೆ ನೀವು ಯಾಕೆ ಹೋಗಿಲ್ಲ? ಜೆಎನ್ಯು ಮತ್ತು ಜಾಮಿಯಾ ಮಿಲಿಯಾದಲ್ಲಿ ದಾಳಿ ನಡೆದಾಗ ನೀವು ಯಾಕೆ ಅಲ್ಲಿಗೆ ಭೇಟಿ ನೀಡಿಲ್ಲ ಎಂದು ಪ್ರಶ್ನಿಸಿದಾಗ, "ಕಾನೂನು ಸುವ್ಯವಸ್ಥೆ ಕೇಂದ್ರದ ಅಧೀನದಲ್ಲಿ ಬರುತ್ತದೆ. ಅಲ್ಲಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭೇಟಿ ನೀಡಬೇಕಿತ್ತು. ನಾನು ಅಲ್ಲಿಗೆ ಭೇಟಿ ನೀಡಿ ಮಾಡುವುದು ಏನಿಲ್ಲ" ಎಂದು ಉತ್ತರಿಸಿದ್ದಾರೆ.