ತುಮಕೂರು, ಫೆ 04 (Daijiworld News/MB) : ತುಮಕೂರಿನ ಮಾಜಿ ಸಂಸದ ಮುದ್ದಹನುಮೇಗೌಡರ ಆಪ್ತರಾಗಿರುವ ಕಾಂಗ್ರೆಸ್ ಮುಖಂಡ ಹಾಗೂ ಕ್ಲಾಸ್ ಒನ್ ಗುತ್ತಿಗೆದಾರ ರಾಯಸಂದ್ರ ರವಿಕುಮಾರ್ ಮನೆ ಮೇಲೆ ಐಟಿ ದಾಳಿ ನಡೆದಿದೆ.
ಸೋಮವಾರ ಸಂಜೆಯಿಂದ ತಡರಾತ್ರಿಯವರೆಗೂ ನಗರದ ಎಸ್.ಐ.ಟಿ. ಪ್ರದೇಶದಲ್ಲಿ ಇರುವ ರವಿ ಅವರ ಮನೆಯಲ್ಲಿ ಐಟಿ ಅಧಿಕಾರಿಗಳು ಶೋಧಕಾರ್ಯ ನಡೆಸಿ ಕಲೆವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಅಷ್ಟು ಮಾತ್ರವಲ್ಲದೇ ತುರುವೇಕೆರೆಯ ರಾಯಸಂದ್ರದಲ್ಲಿನ ರವಿಕುಮಾರ್ ಅವರ ಮನೆ ಹಾಗೂ ಅವರ ಸಹೋದರಿಯ ಮನೆಯ ಮೇಲೂ ಐಟಿ ಏಕಕಾಲದಲ್ಲಿ ದಾಳಿ ಮಾಡಿದ್ದು ಬ್ಯಾಂಕ್ ಮತ್ತು ಹಣಕಾಸಿನ ವ್ಯವಹಾರದ ದಾಖಲೆಗಳನ್ನು ವಶಕ್ಕೆ ಪಡೆದಿದೆ.
ಮಂಗಳವಾರ ಬೆಳಿಗ್ಗೆ 11 ಗಂಟೆಗೆ ತುಮಕೂರಿನಲ್ಲಿನ ಆದಾಯ ತೆರಿಗೆ ಇಲಾಖೆ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ರವಿಕುಮಾರ್ ಕಳೆದ ಬಾರಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದರು.