ರಾಂಚಿ, ಫೆ 04 (Daijiworld News/MB) : ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧದ ವಂಚನೆ ಮತ್ತು ಅಪ್ರಾಮಾಣಿಕತೆ ಆರೋಪ ಕುರಿತು ರಾಂಚಿ ಜಿಲ್ಲಾ ನ್ಯಾಯಾಲಯ ವಿಚಾರಣೆ ಆರಂಭಿಸಿದೆ. ಈ ಪ್ರಕರಣದ ಮೂರನೇ ಆರೋಪಿ ಕೇಂದ್ರ ಸಚಿವ ರಾಮದಾಸ್ ಅಟಾವಳೆ.
ಮೋದಿ ಹಾಗೂ ಅಮಿತ್ ಶಾ ವಿರುದ್ಧ ಈ ದೂರನ್ನು ಹೈಕೋರ್ಟ್ ವಕೀಲ ಎಚ್.ಕೆ.ಸಿಂಗ್ ಎಂಬವರು ದಾಖಲು ಮಾಡಿದ್ದು, "ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂಪಾಯಿ ವರ್ಗಾಯಿಸುವುದಾಗಿ ಸುಳ್ಳು ಭರವಸೆ ನೀಡಿ ವಂಚಿಸಿದ್ದಾರೆ" ಎಂದು ಆರೋಪಿಸಿದ್ದಾರೆ.
ಭಾರತೀಯ ದಂಡಸಹಿಂತೆಯ ಸೆಕ್ಷನ್ 415 (ವಂಚನೆ), 420 (ಅಪ್ರಾಮಾಣಿಕತೆ) ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 123 (ಬಿ) ಅನ್ವಯ ಪ್ರಕರಣ ದಾಖಲಾಗಿದೆ.
"ಅಮಿತ್ ಶಾ ಅವರು ಬಿಜೆಪಿ ಆಶ್ವಾಸನೆ ನೀಡಿದ ಹಿನ್ನಲೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿದೆ ಎಂದು ಹೇಳಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಅವರು ನೀಡಿದ ಭರವಸೆಗಳ ಪೈಕಿ 15 ಲಕ್ಷ ಕೊಡುವುದು ಕೂಡಾ ಒಂದಾಗಿದೆ. ಹಾಗಾದರೆ ಅದನ್ನು ಯಾಕೆ ಈಡೇರಿಸಲಿಲ್ಲ" ಎಂದು ಸಿಂಗ್ ಅವರು ಪ್ರಶ್ನಿಸಿದ್ದಾರೆ.
"ಮತ ಪಡೆಯುವ ಉದ್ದೇಶದಿಂದಾಗಿ ಜನಪ್ರತಿನಿಧಿಗಳು ಸುಳ್ಳು ಭರವಸೆಗಳನ್ನು ನೀಡಬಾರದು. ಇದು ಜನರಿಗೆ ಮಾಡುವ ವಂಚನೆ" ಎಂದು ಆಪಾದನೆ ಮಾಡಿದ್ದಾರೆ.
"2014ರ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಹಾಕುವುದಾಗಿ ಭರವಸೆ ನೀಡಿದ್ದರು. ಇದು ವಾಸ್ತವಕ್ಕೆ ವಿರುದ್ಧವಾದದ್ದು" ಎಂದು ಸಿಂಗ್ ಅವರು ಅಭಿಪ್ರಾಯಪಟ್ಟಿದ್ದಾರೆ.