ನವದೆಹಲಿ, ಫೆ 04 (Daijiworld News/MB) : ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಜಾಗವಿಲ್ಲ, ಜನರು ತಮ್ಮ ಶಕ್ತಿಯನ್ನು ಬುಲೆಟ್ ಬದಲಾಗಿ ಮತದಾನದಿಂದ ತೋರಿಸಿ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ದೆಹಲಿ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಪ್ರಚೋಧನಕಾರಿ ಭಾಷಣ ಮಾಡಿದ್ದ ಅನುರಾಗ್ ಠಾಕೂರ್ ಈಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬುಲೆಟ್ ಬದಲಾಗಿ ಮತದಾನ ಶಕ್ತಿ ಬಳಸಿ ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಜಾಗವಿಲ್ಲ. ಸೂಕ್ತ ರೀತಿಯಲ್ಲಿ ಮತದಾನದ ಹಕ್ಕು ಬಳಕೆಯಾಗಬೇಕು, ಅದನ್ನು ಬುಲೆಟ್ ರೀತಿಯಲ್ಲಿ ಉಪಯೋಗಿಸಬೇಕು ಎಂದು ಅವರು ಹೇಳಿದ್ದಾರೆ.
ಜನವರಿ 27ರಂದು ದೆಹಲಿ ಪ್ರಚಾರ ಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಅನುರಾಗ್ ಠಾಕೂರ್, ದೇಶದ್ರೋಹಿಗಳನ್ನು ಎಂದು ಘೋಷಣೆ ಕೂಗಿದ್ದು ಜನರು ಗುಂಡಿಕ್ಕಿ (ಗೋಲಿಮಾರೋ) ಎಂದು ಪ್ರತಿ ಘೋಷಣೆ ಕೂಗಿದ್ದರು. ಈ ಘೋಷಣೆ ಕೂಗುವ ಸಂದರ್ಭದಲ್ಲಿ ಅನುರಾಗ್ ಠಾಕೂರ್ ಅವರು ತನ್ನ ಎರಡು ಕೈಗಳನ್ನು ಮೇಲಕ್ಕೆ ಎತ್ತಿ ಜನರನ್ನು ಪ್ರೋತ್ಸಾಹ ಮಾಡುತ್ತಿದ್ದರು.
ಈ ಘಟನೆ ಭಾರೀ ಚರ್ಚೆಗೆ ಕಾರಣವಾಗಿತ್ತು ಹಾಗೂ ಹಲವು ಜನರು ಠಾಕೂರ್ ಅವರ ಘೋಷಣೆಗೆ ಟೀಕೆ ವ್ಯಕ್ತಪಡಿಸಿದ್ದರು. ಜನವರಿ 31ರಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮುಖಂಡ ವಿಷ್ಣು ಪ್ರಸಾದ್ .ಕೆ ಅವರು ಬಿಜೆಪಿ ನಾಯಕನ ವಿರುದ್ಧ ದೂರು ದಾಖಲಿಸಿದ್ದರು.
70 ವಿಧಾನಸಭಾ ಕ್ಷೇತ್ರಗಳಿರುವ ದೆಹಲಿ ವಿಧಾನಸಭೆ ಚುನಾವಣೆಯು ಫೆಬ್ರವರಿ 8ರಂದು ಮತದಾನ ನಡೆಯಲಿದ್ದು, ಫೆಬ್ರವರಿ 11ರಂದು ಫಲಿತಾಂಶ ಪ್ರಕಟವಾಗಲಿದೆ