ಮಂಡ್ಯ, ಫೆ 04 (Daijiworld News/MB) : "ನನಗೆ ಉಪಮುಖ್ಯಮಂತ್ರಿ ಸ್ಥಾನ ಬೇಕು ಎಂದು ಮುಜುಗುರಕ್ಕೆ ಒಳಪಡಲು ನಾನು ಇಷ್ಟಪಡುವುದಿಲ್ಲ. ನಾನು ಇನ್ನು ಮುಂದೆ ಉಪಮುಖ್ಯಮಂತ್ರಿ ಹುದ್ದೆ ಕುರಿತಾಗಿ ಮಾತನಾಡುವುದಿಲ್ಲ" ಎಂದು ಆರೋಗ್ಯ ಸಚಿವ ಶ್ರೀ ರಾಮುಲು ಹೇಳಿದ್ದಾರೆ.
ಮಂಗಳವಾರ ಮಂಡ್ಯದಲ್ಲಿ ಮಾತನಾಡಿದ ಅವರು, "ಉಪಮುಖ್ಯಮಂತ್ರಿ ವಿಚಾರದಲ್ಲಿ ಪಕ್ಷಕ್ಕೆ ಮುಜುಗರ ಉಂಟಾಗುವುದಾದರೆ ನಾನು ಆ ಬಗ್ಗೆ ಮಾತನಾಡುವುದಿಲ್ಲ. ಎಲ್ಲೂ ಕೂಡಾ ಈ ಬಗ್ಗೆ ಪ್ರಸ್ತಾಪ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ಕೈಗೊಳ್ಳುತ್ತಾರೆ" ಎಂದು ಅವರು ತಿಳಿಸಿದ್ದಾರೆ.
ಇನ್ನೂ ಸಚಿವ ಸ್ಥಾನದ ವಿಚಾರದಲ್ಲಿ ಮೂಲ ಬಿಜೆಪಿ ಶಾಸಕ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ನಮ್ಮ ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ. ನಮಗೆ ಸಚಿವ ಸ್ಥಾನ ಬೇಕು ಎಂಬ ಆಸೆ ಎಲ್ಲರಲ್ಲೂ ಇರುತ್ತದೆ. ಅವರ ಆಸೆಯನ್ನು ಯಡಿಯೂರಪ್ಪನವರು ಅವಕಾಶ ಸಿಕ್ಕ ಸಂದರ್ಭದಲ್ಲಿ ಈಡೇರಿಸುತ್ತಾರೆ" ಎಂದರು