ನವದೆಹಲಿ, ಫೆ 04 (Daijiworld News/MB) : ಕೇರಳದಿಂದ ಯಾವುದೇ ಲವ್ ಜಿಹಾದ್ ಪ್ರಕರಣ ವರದಿಯಾಗಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಸಂಸತ್ತಿನಲ್ಲಿ ಸ್ಪಷ್ಟನೆ ನೀಡಿದೆ.
ಲವ್ ಜಿಹಾದ್ಗೆ ಸಂಬಂಧಿಸಿ ಕೇರಳ ಹೈಕೋರ್ಟ್ನ ಅಭಿಪ್ರಾಯದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಅರಿವು ಇದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸರ್ಕಾರ ಕೇರಳದಿಂದ ಯಾವುದೇ ಲವ್ ಜಿಹಾದ್ ಪ್ರಕರಣ ವರದಿಯಾಗಿಲ್ಲ ಎಂದು ತಿಳಿಸಿದೆ.
ಗೃಹ ಖಾತೆ ರಾಜ್ಯ ಸಚಿವರು ಕೇರಳದ ಕಾಂಗ್ರೆಸ್ ಮುಖಂಡ ಬೆನ್ನಿ ಬೆಹವಾನ್ ಕೇಳಿದ ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ದಕ್ಷಿಣ ರಾಜ್ಯದಿಂದ ಯಾವುದೇ ಲವ್ಜಿಹಾದ್ ಪ್ರಕರಣಗಳನ್ನು ಕೇಂದ್ರ ಏಜೆನ್ಸಿಗಳು ವರದಿ ಮಾಡಿದೆಯೇ ಎಂದು ಅವರು ಪ್ರಶ್ನಿಸಿದ್ದರು.
ಕಾನೂನಿನ ವ್ಯಾಪ್ತಿಯಲ್ಲಿ ಎಲ್ಲೂ ಕೂಡಾ ಲವ್ ಜಿಹಾದ್ ಎಂಬುದನ್ನು ವ್ಯಾಖ್ಯಾನ ಮಾಡಿಲ್ಲ. ಇಂತಹ ಯಾವುದೇ ಪ್ರಕರಣಗಳು ಕೇಂದ್ರೀಯ ಏಜೆನ್ಸಿಗಳು ವರದಿ ಮಾಡಿಲ್ಲ ಎಂದು ಗೃಹ ಖಾತೆ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಸಂವಿಧಾನದ 25ನೇ ವಿಧಿಯ ಅನ್ವಯ ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಹಾಗೂ ಆರೋಗ್ಯಕ್ಕೆ ಅನುಸಾರವಾಗಿ ಯಾವುದೇ ಧರ್ಮವನ್ನು ಆಚರಣೆ ಮಾಡಲು ಅವಕಾಶವಿದೆ. ಈ ನಿರ್ಧಾರವನ್ನು ಕೇರಳ ಹೈಕೋರ್ಟ್ ಸೇರಿದಂತೆ ಹಲವು ನ್ಯಾಯಾಲಯಗಳು ಎತ್ತಿಹಿಡಿದಿದೆ ಎಂದು ತಿಳಿಸಿದ್ದಾರೆ.