ಬೆಂಗಳೂರು, ಫೆ 04 (Daijiworld News/MB) : ಕೆಲವರದ್ದು ಬ್ರಿಟಿಷರ ಜೊತೆಗೆ ಹೊಂದಾಣಿಕೆಯ ಹೋರಾಟ, ಉಪವಾಸಕ್ಕೆ ಹೆದರಿ ಬ್ರಿಟಿಷರು ಸ್ವಾತಂತ್ರ ಕೊಟ್ಟದ್ದಲ್ಲ ಎಂಬ ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ ಸಂಸದ ಅನಂತಕುಮಾರ ಹೆಗಡೆ ಅವರು ನನ್ನ ಹೇಳಿಕೆಯಲ್ಲಿ ನಾನು ಎಲ್ಲಿಯೂ ಕೂಡಾ ಯಾವುದೇ ವ್ಯಕ್ತಿ, ಪಕ್ಷವನ್ನು ಉಲ್ಲೇಖಿಸಿಲ್ಲ ಎಂದು ಹೇಳಿದ್ದಾರೆ.
ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಗಾಂಧೀಜಿ ಅವರನ್ನು ಕುರಿತಾದದ್ದು ಎಂಬ ವಾದ, ಚರ್ಚೆಗಳು ನಡೆದಿದೆ.
ಮಂಗಳವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, "ನಾನು ನನ್ನ ಹೇಳಿಕೆಯಲ್ಲಿ ಯಾವುದೇ ರಾಜಕೀಯ ಪಕ್ಷವನ್ನಾಗಲಿ, ಮಹಾತ್ಮಾ ಗಾಂಧೀಜಿ ಅವರನ್ನಾಗಲಿ ಅಥವಾ ಯಾವುದೇ ವ್ಯಕ್ತಿಯನ್ನಾಗಲಿ ಉಲ್ಲೇಖ ಮಾಡಿಲ್ಲ. ಸ್ವಾತಂತ್ರ್ಯ ಹೋರಾಟದ ಬಗೆಗಳನ್ನು ನಾನು ವಿಭಾಗಿಸಿ ಹೇಳಿದ್ದೆ. ನಾನು ಅಮದು ಏನು ಮಾತಾನಾಡಿದ್ದೇನೆ ಎಂಬುದರ ಬಗ್ಗ ಎಲ್ಲೆಡೆ ಮಾಹಿತಿ ಲಭ್ಯವಿದೆ. ನನ್ನ ವೆಬ್ಸೈಟ್ನಲ್ಲಿಯೂ ಇದೆ. ಅಂದು ನಾನು ಭಾಷಣದಲ್ಲಿ ಗಾಂಧೀಜಿಯವರನ್ನು ಆಗಲಿ ಅಥವಾ ನೆಹರೂ ಅವರನ್ನಾಗಲಿ ಟೀಕೆ ಮಾಡಿಲ್ಲ. ದೇಶದ ಸ್ವಾತಂತ್ರ್ಯ ಹೋರಾಟದ ಕುರಿತು ಚರ್ಚೆ ಮಾಡಿದ್ದೆ ಎಂದು ಹೇಳಿದ್ದಾರೆ.
ಮಾಧ್ಯಮಗಳಲ್ಲಿ ನನ್ನ ಹೇಳಿಕೆ ಕುರಿತಾಗಿ ಬರುತ್ತಿರುವ ವಿಶ್ಲೇಷನೆಗಳು ವರದಿಗಳು ಎಲ್ಲಾವೂ ಸುಳ್ಳು, ಈಗ ಚರ್ಚೆಯಾಗುವ ರೀತಿ ನಾನು ಏನನ್ನು ಮಾತಾನಾಡಿಲ್ಲ, ಇದು ಅನಗತ್ಯವಾದ ವಿವಾದ ಎಂದು ಅವರು ದೂರಿದ್ದಾರೆ.
ಸಮೃದ್ಧ ಸಾಹಿತ್ಯ ಹಾಗೂ ಸಾವರ್ಕರ್ ಸಾಹಿತ್ಯ ಸಂಘ ಜ.1 ಶನಿವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ಮತ್ತೆ ಮತ್ತೆ ಸಾವರ್ಕರ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅನಂತ ಕುಮಾರ ಹೆಗಡೆ "ಈ ದೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಮೂರು ವಿಧವಿದೆ. ಚಂದ್ರಶೇಖರ ಆಜಾದ್, ಭಗತ್ ಸಿಂಗ್ ಅಂತಹ ಕ್ರಾಂತಿಕಾರಿಗಳು ಶಸ್ತ್ರಸಜ್ಜಿತರಾಗಿ ಹೋರಾಟ ಮಾಡಿದರು. ಇನ್ನೊಂದು ವರ್ಗ ಅತ್ಯಂತ ಪ್ರಖರ ರಾಷ್ಟ್ರೀಯ ವಿಚಾರಗಳೊಂದಿಗೆ ಶಿವಾಜಿ, ಹುಕ್ಕ–ಬುಕ್ಕರಂತಹ ನೂರಾರು ಮಂದಿಯನ್ನು ಮುಂದೆ ತಂದರು. ಇನ್ನೊಂದು ರೀತಿಯ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ಬಳಿಯೇ ಹೇಗೆ ಹೋರಾಟ ಮಾಡಬೇಕು ಎಂದು ಕೇಳಿ, ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡರು. ಒಳಗಡೆ (ಜೈಲಿನಲ್ಲಿ) ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಮನವಿ ಮಾಡಿಕೊಂಡರು. ಪರಿಣಾಮ ಲಾಠಿ ನೋಡದ, ಏಟು ತಿನ್ನದವರನ್ನು ಇತಿಹಾಸದ ಪುಟಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಎಂದು ಬಿಂಬಿಸಲಾಯಿತು. ಇತಿಹಾಸದ ಪ್ರಕಾರ ಬ್ರಿಟಿಷರು ಉಪವಾಸಕ್ಕೆ ಹೆದರಿ, ಸ್ವಾತಂತ್ರ್ಯ ಕೊಟ್ಟು ಓಡಿ ಹೋದರು ಎಂಬುದನ್ನು ಕೇಳಿದರೆ ತಣ್ಣಗಿರುವ ರಕ್ತ ಹೆಪ್ಪುಗಟ್ಟಿ ಹೋಗುತ್ತದೆ" ಎಂದು ಹೇಳಿದ್ದರು.
ಅನಂತಕುಮಾರ ಅವರ ಹೇಳಿಕೆಯು ಸ್ವಾತಂತ್ರ್ಯಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡಿದ್ದ ಗಾಂಧೀಜಿ ಅವರ ಹೋರಾಟವನ್ನು ಪ್ರಶ್ನಿಸುವಂತಿದೆ ಎಂಬ ಟೀಕೆಗಳು ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಬಿಜೆಪಿ ಕೇಂದ್ರ ಶಿಸ್ತುಪಾಲನ ಸಮಿತಿಯು ಅನಂತಕುಮಾರ ಹೆಗಡೆ ಅವರಿಗೆ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಿದೆ.