ನವದೆಹಲಿ, ಫೆ 04 (Daijiworld News/MB) : ನಾಳೆ ಮಧ್ಯಾಹ್ನ 1 ಗಂಟೆಯೊಳಗೆ ಬಿಜೆಪಿಯು ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಿ ಮತ್ತು ಯಾರೊಂದಿಗಾದರೂ ನಾನು ಚರ್ಚೆಗೆ ಸಿದ್ಧ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸವಾಲು ಮಾಡಿದ್ದಾರೆ.
ದೆಹಲಿ ಚುನಾವಣೆಗೆ ಇನ್ನು ಮೂರು ದಿನಗಳು ಬಾಕಿಯಿದ್ದು ಇದುವರೆಗೂ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಜೆಪಿ ಘೋಷಣೆ ಮಾಡದಿರುವ ಹಿನ್ನಲೆಯಲ್ಲಿ ಬಿಜೆಪಿಯನ್ನು ಟೀಕೆ ಮಾಡಿದ ಅವರು, ಬಿಜೆಪಿ ಪಕ್ಷ ಇನ್ನೂ ಕೂಡಾ ಅಭ್ಯರ್ಥಿಯನ್ನು ಘೋಷಣೆ ಮಾಡದಿದ್ದಲ್ಲಿ ಮತ್ತೊಂದು ಪತ್ರಿಕಾಗೋಷ್ಟಿಯನ್ನು ಕರೆಯುತ್ತೇನೆ ಎಂದು ತಿಳಿಸಿದ್ದಾರೆ.
ದೆಹಲಿ ಜನತೆಯಲ್ಲಿ ಬಿಜೆಪಿಯ ಅಮಿತ್ ಶಾ ಅವರು ಖಾಲಿ ಚೆಕ್ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿಯನ್ನು ದೆಹಲಿಯ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಘೋಷಣೆ ಮಾಡುತ್ತೇವೆ ಎಂದು ಅಮಿತ್ ಶಾ ಅವರು ಹೇಳಿದ್ದಾರೆ. ಆದರೆ ಬಿಜೆಪಿಗೆ ಮತ ಹಾಕಲು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಜನರು ತಿಳಿಯಲು ಬಯಸುತ್ತಾರೆ ಎಂದು ಅವರು ಹೇಳಿದ್ದಾರೆ.
ಅಮಿತ್ ಶಾ ಅವರು ಚುನಾವಣೆ ಫಲಿತಾಂಶ ಬಂದ ಬಳಿಕ ಅನಕ್ಷರಸ್ಥ ಮತ್ತು ಅಸಮರ್ಥ ವ್ಯಕ್ತಿಯ ಹೆಸರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳಿದರೆ ಮತ್ತೇನು? ದೆಹಲಿ ಜನತೆಗೆ ಮಾಡಿದ ದ್ರೋಹ ಅದಾಗುತ್ತದೆ ಎಂದು ದೂರಿದರು.
ದೆಹಲಿ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಜೆಪಿ ಈವರೆಗೂ ಘೋಷಣೆ ಮಾಡಿಲ್ಲ, ಬಿಜೆಪಿಯು ಮೋದಿ ಹೆಸರಿನಲ್ಲಿ ಮತಯಾಚನೆ ಮಾಡುತ್ತಿದೆ.
ಈ ಹಿನ್ನಲೆಯಲ್ಲಿ ಕೇಜ್ರಿವಾಲ್ ಅವರು ಬಿಜೆಪಿಯನ್ನು ಟೀಕೆ ಮಾಡುತ್ತಾ ಹೊಸ ವರ್ಷಕ್ಕೆ ಶುಭಾಶಯ ಕೋರುವಾಗ 7 ಜನ ಮುಖ್ಯಮಂತ್ರಿ ಅಭ್ಯರ್ಥಿಗಳಿರುವ ದೆಹಲಿ ಬಿಜೆಪಿಗೆ ಹೊಸ ವರ್ಷದ ಶುಭಾಶಯಗಳು ಎಂದು ಹೇಳಿದ್ದರು. ಹಾಗೆಯೇ ಮನೋಜ್ ತಿವಾರಿ, ಗೌತಮ್ ಗಂಭೀರ್, ವಿಜಯ್ ಗೋಯಲ್, ಹರ್ದೀಪ್ ಸಿಂಗ್ ಪುರಿ, ಹರ್ಷವರ್ಧನ್, ವಿಜೇಂದರ್ ಗುಪ್ತಾ ಮತ್ತು ಪರ್ವೇಶ್ ಸಾಹೀಬ್ ಸಿಂಗ್ ಅವರನ್ನು ಉಲ್ಲೇಖ ಮಾಡಿದ್ದರು.