ನವದೆಹಲಿ, ಫೆ 4 (DaijiworldNews/SM): ದೇಶದ ಗಮನ ಸೆಳೆದಿರುವ ದೆಹಲಿ ವಿಧಾನಸಭೆಗೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಈ ಹಿನ್ನೆಲೆಯಲ್ಲಿ ಮೂಋ ಪ್ರಮುಖ ಪಕ್ಶಗಳು ಚುನಾವಣೆ ಗೆದ್ದು ರಾಜಧಾನಿಯಲ್ಲಿ ಅಧಿಕಾರದ ವಹಿಸಿಕೊಳ್ಳಲು ತುದಿಗಾಲಲ್ಲಿ ನಿಂತಿವೆ. ಈ ನಡುವೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಧಾನಿ ಮೋದಿ ಹಾಗೂ ಅರವಿಂದ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಹಾಗೂ ಕೇಜ್ರಿವಾಲ್ ಅವರಿಗೆ ಯುವಕರಿಗೆ ಉದ್ಯೋಗ ನೀಡುವ ಆಸಕ್ತಿ ಇಲ್ಲ. ಬದಲಾಗಿ ಅಧಿಕಾರವನ್ನು ಉಳಿಸುವ ಜಿಜ್ಞಾಸೆ ಮಾತ್ರ ಇದೆ. ತಮ್ಮ ಖುರ್ಚಿಯನ್ನು ಭದ್ರಪಡಿಸಿಕೊಳ್ಳಲು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಆರ್ಥಿಕವಾಗಿ ದಿವಾಳಿಯಾಗಿರುವ ಕೇಂದ್ರ ಸರ್ಕಾರ ಒಂದೊಂದಾಗಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮಾರಲು ಮುಂದಾಗಿದೆ. ಏರ್ ಇಂಡಿಯಾ ಮಾತ್ರವಲ್ಲ ಮುಂದಿನ ದಿನಗಳಲ್ಲಿ ಮೋದಿ ತಾಜ್ ಮಹಲ್ ಕೂಡ ಮಾರಲು ಹಿಂಜರಿಯುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅರ್ಥ ವ್ಯವಸ್ಥೆಯ ಬಗ್ಗೆ ತಿಳುವಳಿಕೆ ಇರದ ವ್ಯಕ್ತಿಯಾಗಿದ್ದಾರೆ. ಇವರು ಮತ್ತೇನನ್ನು ತಾನೇ ಮಾಡಲು ಸಾಧ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.
ದೇಶದಲ್ಲಿ ನಿರುದ್ಯೋಗ, ಆರ್ಥಿಕ ಬಿಕ್ಕಟ್ಟಿನಂತಹ ಸಮಸ್ಯೆ ತೀವ್ರವಾಗಿದ್ದು, ಜನತೆ ಕಂಗೆಟ್ಟಿದ್ದಾರೆ. ಇದೇ ಸಂದರ್ಭ ಜನರ ಹಾದಿ ತಪ್ಪಿಸುವ ಸಲುವಾಗಿ ಸಿಎಎ ಹಾಗೂ ಎನ್ ಆರ್ ಸಿ ಜಾರಿಗೆ ಮೋದಿ ಸರ್ಕಾರ ಹುನ್ನಾರ ನಡೆಸಿದೆ ಎಂದು ಆರೋಪಿಸಿದ್ದಾರೆ.