ಬೆಂಗಳೂರು, ಫೆ 4 (DaijiworldNews/SM): ರಾಜ್ಯದಲ್ಲಿ ಹಲವು ನಾಟಕೀಯ ಬೆಳವಣಿಗೆಗಳ ಬಳಿಕ ವಿಭಿನ್ನ ರೀತಿಯಲ್ಲಿ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಆಡಳಿತಕ್ಕೆ ಬಂದಿದೆ. ಆದರೆ, ಬಿಜೆಪಿ ಅಧಿಕಾರಕ್ಕೇರಲು ಹಲವು ಕಲ್ಲು ಮುಳ್ಳಿನಹಾದಿಯನ್ನು ಸಾಗಿ ಬಂದಿದೆ. ಬಿಜೆಪಿ ಸರಕಾರ ರಚನೆಯಾಗಿ ಸುಮಾರು ಅರ್ಧ ವರ್ಷ ಕಳೆಯುತ್ತಿದೆ. ಆದರೆ, ಸಚಿವ ಸಂಪುಟ ವಿಸ್ತರಣೆ ಇದೀಗ ಸರಕಾರಕ್ಕೆ ಕಗ್ಗಂಟಾಗಿದೆ.
ಬಿಎಸ್ ವೈ ಸಿಎಂ ಖುರ್ಚಿ ಅಲಂಕರಿಸಲು ಕಾರಣರಾದ ಈ ಹಿಂದಿನ ಮೈತ್ರಿ ಪಕ್ಷದ ವಿರುದ್ಧ ಬಂಡೆದಿದ್ದ ಶಾಸಕರಿಗೆ ಪಕ್ಷದಲ್ಲಿ ಸ್ಥಾನ ನೀಡಿ ಸಚಿವರನ್ನಾಗಿಸುವ ಭರವಸೆಯನ್ನು ಆರಂಭದಲ್ಲೇ ಯಡಿಯೂರಪ್ಪ ನೀಡಿದ್ದರು. ಇದೀಗ ಸಚಿವ ಸ್ಥಾನ ನೀಡುವ ವಿಚಾರ ಸಿಎಂಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕೊಟ್ಟ ಮಾತಿಗೆ ಬದ್ಧನಾಗುವ ಅನಿವಾರ್ಯತೆ ಸಿಎಂ ಬಿಎಸ್ ವೈಗಿದೆ. ಒಂದೊಮ್ಮೆ ಮೈತ್ರಿ ಸರಕಾರದಿಂದ ಬಂದವರಿಗೆ ಖಾತೆ ನೀಡಿದಿದ್ದಲ್ಲಿ ಮಾತಿಗೆ ತಪ್ಪಿದ ಸಿಎಂ ಎಂಬ ಹೊಸ ಖ್ಯಾತಿ ಶುರುವಾಗಲಿದೆ. ಈ ಹಿನ್ನೆಲೆಯಲ್ಲಿ ಸಿಎಂ ಅವರ ಪಾಲಿಗೆ ಸಂಪುಟ ವಿಸ್ತರಣೆ ಒಂದಿಷ್ಟು ಕಗ್ಗಂಟಾಗುವ ಲಕ್ಷಣಗಳು ಹೆಚ್ಚಾಗಿವೆ.
ಪ್ರಮುಖ ಖಾತೆಗಳಿಗೆ ಬೇಡಿಕೆ:
ಇನ್ನು ಈಗಾಗಲೇ ಖಾಲಿ ಉಳಿದಿರುವ ಇಂಧನ, ಬೆಂಗಳೂರು ನಗರಾಭಿವೃದ್ಧಿ, ಸಹಕಾರ, ಬೃಹತ್ ನೀರಾವರಿ, ವೈದ್ಯಕೀಯ ಶಿಕ್ಷಣ, ಉನ್ನತ ಶಿಕ್ಷಣ ಖಾತೆಗಳನ್ನು ಪಡೆಯಲು ಲಾಭಿಗಳು ನಡೆಸಲಾಗುತ್ತಿವೆ. ಕೆಲವು ಸಚಿವಾಕಾಂಕ್ಷಿಗಳು ತಾವು ಬಯಸಿದ ಪ್ರಮುಖ ಖಾತೆಗಳನ್ನೇ ನೀಡುವಂತೆ ಸಿಎಂ ಅವರ ಮೇಲೆ ಒತ್ತಡವನ್ನು ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಅವರನ್ನು ಮನವೊಲಿಸುವ ಕಾರ್ಯವನ್ನು ಸಿಎಂ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಮುಖ ಆಕಾಂಕ್ಷಿಗಳು:
ಬೃಹತ್ ನೀರಾವರಿ ಖಾತೆ-ರಮೇಶ್ ಜಾರಕೀಹೊಳಿ
ಪ್ರವಾಸೋದ್ಯಮ, ಇಂಧನ-ಆನಂದ್ ಸಿಂಗ್
ತೋಟಗಾರಿ-ಬಿ.ಸಿ. ಪಾಟೀಲ್
ಸಣ್ಣ ಕೈಗಾರಿಕೆ-ಶ್ರೀಮಂತ್ ಪಾಟೀಲ್
ಕೃಷಿ-ಶಿವರಾಮ್ ಹೆಬ್ಬಾರ್
ಬೆಂಗಳೂರು ನಗರಾಭಿವೃದ್ಧಿ-ಸೋಮಶೇಖರ್
ನಗರಾಭಿವೃದ್ಧಿ-ಬೈರತಿ ಬಸವರಾಜ್
ಸಣ್ಣ ನೀರಾವರಿ-ನಾರಾಯಣ ಗೌಡ
ವೈದ್ಯಕೀಯ ಶಿಕ್ಷಣ-ಸುಧಾಕರ್
ಉನ್ನತ ಶಿಕ್ಷಣ-ಅರವಿಂದ ಲಿಂಬಾವಳಿ
ಕಾರ್ಮಿಕ, ತೋಟಗಾರಿಕೆ-ಗೋಪಾಲಯ್ಯ
ಪೌರಾಡಳಿತ-ಉಮೇಶ್ ಕತ್ತಿ
ಕರಾವಳಿ ಕರ್ನಾಟಕದಿಂದಲೂ ಸಚಿವ ಸ್ಥಾನಕ್ಕಾಗಿ ಮನವಿ:
ಮೈತ್ರಿ ಸರಕಾರದ ಪತನದ ಸಂದರ್ಭ ಪ್ರಮುಖವಾಗಿದ್ದ ಸಿ.ಪಿ. ಯೋಗೀಶ್ವರ್ ಗೆ ಕೊಟ್ಟ ಮಾತಿನಂತೆ ಸಚಿವ ಸ್ಥಾನ ಪಕ್ಕವಾಗಿದೆ. ಆದರೆ, ಇವರಿಗೆ ಸಚಿವ ಸ್ಥಾನ ನೀಡುತ್ತಿರುವುದು ಕರಾವಳಿಗರಲ್ಲಿ ಅಸಮಾಧಾನ ಹೋಗೆ ಏಳಲು ಕಾರಣವಾಗಿದೆ. ಬಿಜೆಪಿಯ ಭದ್ರ ಕೋಟೆ ಎನಿಸಿಕೊಂಡಿರುವುದು ಕರಾವಳಿ ಕರ್ನಾಟಕ. ಇಲ್ಲಿನ ಮೂರು ಜಿಲ್ಲೆಗಳಲ್ಲಿ ಬಿಜೆಪಿ ಭರ್ಜರಿಯಾಗಿ ಗೆಲುವು ಸಾಧಿದೆ. ಆದರೆ, ಈ ಭಾಗವನ್ನು ಕಡೆಗಣಿಸಲಾಗಿದೆ ಎಂಬ ಆರೋಪಗಳು ಆರಂಭದಿಂದಲೂ ಕೇಳಿ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೮ ವಿಧಾನಸಭಾ ಕ್ಷೇತ್ರಗಳ ಪೈಕಿ ೭ರಲ್ಲಿ ಗೆಲುವು ಸಾಧಿಸಿದ್ದರೂ ಯಾರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಮತ್ತೊಂದೆಡೆ, ಉಡುಪಿಯಲ್ಲೂ ಬಿಜೆಪಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದ್ದರೂ ಕೂಡ ಮಂತ್ರಿಗಿರಿ ಮಾತ್ರ ಯಾರಿಗೂ ನೀಡಿಲ್ಲ. ಇನ್ನೊಂದೆಡೆ ಉತ್ತರ ಕರ್ನಾಟಕಕ್ಕೂ ಇದೇ ಪರಿಸ್ಥಿತಿ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಎಸ್. ಅಂಗಾರ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ಇನ್ನು ಉಡುಪಿ ಜಿಲ್ಲೆಯಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಹಾಗೂ ಉಡುಪಿ ಶಾಸಕ ರಘುಪತಿ ಭಟ್ ಆಕಾಂಕ್ಷಿಗಳಲ್ಲಿ ಪ್ರಮುಖರಾಗಿದ್ದಾರೆ.
ಮೂಲ ಬಿಜೆಪಿಗರಿಂದ ಸಚಿವ ಸ್ಥಾನಕ್ಕೆ ಪಟ್ಟು:
ಇನ್ನು ಹೊರಗಿನಿಂದ ಬಂದವರಿಗೆ ಸಚಿವ ಸ್ಥಾನ ನೀಡುತ್ತಿರುವ ಕಾರಣದಿಂದಾಗಿ ಮೂಲ ಕಾಂಗ್ರೆಸಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವು ದಶಕಗಳಿಂದ ಪಕ್ಷಕ್ಕಾಗಿ ದುಡಿದಿರುವ ತಮಗೆ ಸಚಿವಸ್ಥಾನ ನೀಡಬೇಕೆನ್ನುವುದು ಅವರ ವಾದವಾಗಿದೆ. ಮೂಲ ಬಿಜೆಪಿಗರ ಪೈಕಿ ಬಹುತೇಕರು ಎರಡಕ್ಕಿಂತಲೂ ಅಧಿಕ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮಾತ್ರವಲ್ಲದೆ ಆರ್ ಎಸ್ ಎಸ್ ಹಿನ್ನೆಲೆಯನ್ನು ಹೊಂದಿದವರಾಗಿದ್ದಾರೆ. ಎಸ್. ಅಂಗಾರ, ಕೆ.ಜಿ. ಬೋಪಯ್ಯ, ಸುನಿಲ್ ಕುಮಾರ್, ಅರವಿಂದ್ ಬೆಲ್ಲದ್, ಅಭಯ್ ಪಾಟೀಲ್, ತಿಪ್ಪರೆಡ್ಡಿ, ರಾಮ್ ದಾಸ್, ಅರವಿಂದ್ ಲಿಂಬಾವಳಿ, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ನೆಹರು ಓಲೇಕಾರ್, ಬಸನ ಗೌಡ ಪಾಟೀಲ್ ಯತ್ನಾಳ್ ಮೊದಲಾದವರು ಮುನ್ನೆಲೆಯಲ್ಲಿದ್ದಾರೆ. ಆದರೆ, ಎಲ್ಲರಿಗೂ ಸಚಿವ ಸ್ಥಾನ ಸಿಗುವುದು ಬಹುತೇಕ ಅನುಮಾನ. ಸಚಿವ ಸ್ಥಾನ ಸಿಗುವುದು ಕಷ್ಟ ಎನ್ನಾಲಾಗುತ್ತಿದ್ದಂತೆ ಇವರು ಸಂಘಪರಿವಾರದತ್ತ ಮುಖಮಾಡಿದ್ದು, ಪಕ್ಷ ನಿಷ್ಠೆಗೆ ಬೆಲೆ ನೀಡುವಂತೆ ಮನವಿ ಮಾಡುವ ಸಾಧ್ಯತೆಗಳಿವೆ.
ಇನ್ನೊಂದೆಡೆ ವಿಶ್ವನಾಥ್ ಹಾಗೂ ಎಂ.ಟಿ.ಬಿ ನಾಗರಾಜ್ ಸೋತ ಅಭ್ಯರ್ಥಿಗಳಾಗಿದ್ದು, ಸಿಎಂ ಹೇಳಿಕೆಯಿಂದ ತೆಪ್ಪಗೆ ಕುಳಿತಿದ್ದಾರೆ. ಸೋತ ಅಭ್ಯರ್ಥಿಗಳಿಗೆ ಸಚಿವ ಸ್ಥಾನ ನೀಡುವುದಿಲ್ಲ ಎನ್ನುತ್ತಿದ್ದಂತೆ ಇವರಿಬ್ಬರು ಸೈಲೆಂಟ್ ಆಗಿದ್ದು, ಮುಂದಿನ ನಿರ್ಧಾರದ ತನಕ ಸುಮ್ಮನಿರಲಿದ್ದಾರೆ. ಎಂ ಎಲ್ ಸಿ ಮಾಡಿ ಅವರನ್ನು ಮತ್ತೆ ಮುನ್ನೆಲೆಗೆ ತರುವ ಸಾಧ್ಯತೆ ಕೂಡ ಅಲ್ಲಗಳೆಯುವಂತಿಲ್ಲ.